

ಉಡುಪಿ: ಪುಷ್ಪಾನಂದ ಪೌಂಡೇಶನ್ ವತಿಯಿಂದ ಉಡುಪಿ ವಿಧಾನಸಭಾ ವ್ಯಾಪ್ತಿಯ 19 ಗ್ರಾಪಂ ಮತ್ತು ನಗರಸಭೆಯ 35 ವಾರ್ಡ್ ವ್ಯಾಪ್ತಿಯ ಸುಮಾರು 1500 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಅಧಿಕ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ಶಾಸಕ ಹಾಗೂ ಪೌಂಡೇಶನ್ ಪ್ರವರ್ತಕ ಯಶ್ಪಾಲ್ ಸುವರ್ಣ ಹೇಳಿದರು.
ಶನಿವಾರ ಬನ್ನಂಜೆ ಮಹಾಲಿಂಗೇಶ್ವರ ಸಭಾಭವನದಲ್ಲಿ 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಗಳಿಕೆ ಒಂದಂಶವನ್ನು ಸಮಾಜದ ಏಳಿಗೆಗೆ ವಿನಿಯೋಗಿಸಲಾಗುತ್ತಿದೆ. ವಿದ್ಯಾರ್ಥಿಗಳು ದೇಶ ಆಸ್ತಿ. ಅವರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಗುರಿ ತಲುಪಬಹುದು. ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳು ಜಿಲ್ಲೆಯ ಗೌರವ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ಪ್ರಸ್ತುತ ಕಾಲಟ್ಟದಲ್ಲಿ ಶಿಕ್ಷಣ ಪಡೆಯುವುದು ಕಷ್ಟಕರವಲ್ಲ. ಸಮಾಜದಲ್ಲಿ ಅನೇಕ ಮಂದಿ ದಾನಿಗಳು ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅವರು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ತಮ್ಮ ತಂದೆ&ತಾಯಿ ಹೆಸರಿನಲ್ಲಿ ವಿದ್ಯಾರ್ಥಿವೇತನ ವಿತರಿಸುವ ಮೂಲಕ ಅವರ ಹೆಸರನ್ನು ಶಾಶ್ವತಗೊಳಿಸಿದ್ದಾರೆ ಎಂದರು.
ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಮಾತನಾಡಿದರು. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾಮ್ ಬನ್ನಂಜೆ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿದಿನೇಶ್ ಅಮೀನ್ ಉಪಸ್ಥಿತರಿದ್ದರು. ಯತೀಶ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.