

ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ಸಾದಲಿ ಕ್ರಾಸ್ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಇದೇ ವೇಳೆ ಅಕ್ರಮವಾಗಿ ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಮಾಲನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಆಂಧ್ರ ಪ್ರದೇಶದ ಕಡಪದ ನಾಗರಾಜು, ನಾಗೇಂದ್ರ, ಶ್ರೀನಿವಾಸ್ ಗಾಯಾಳುಗಳು. ಮಾಲು ಸಾಗಿಸುತ್ತಿದ್ದ ಕಾರು ಹೆದ್ದಾರಿಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದು ಗುರುತು ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿ ಬಿದ್ದಿದೆ. ಇದರ ನಡುವೆಯೂ ಮೂವರು ಪವಾಡ ಎನ್ನುವಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಸ್ಥಳಕ್ಕೆ ಗುಡಿಬಂಡೆ ವೃತ್ತ ನಿರೀಕ್ಷಕ ನಯಾಜ್ ಬೇಗ್ ಭೇಟಿ ನೀಡಿ ಪರಿಶೀಲಿಸಿದರು. ಪೆರೇಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ಕೋಟ್ಯಂತರ ರೂ ಮೌಲ್ಯದ ಮಾಲು ಪತ್ತೆ
ರಸ್ತೆಯಲ್ಲಿ ದಿಢೀರನೇ ಕಾರು ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಇದರ ನಡುವೆ ಕಾರಿನಲ್ಲಿ ೨೪ ರಕ್ತಚಂದನದ ತುಂಡುಗಳನ್ನು ಸೀಟಿನ ಕೆಳ ಭಾಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದೆ. ಕೋಟ್ಯಂತರ ರೂ ಮೌಲ್ಯದ ಈ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೆರೆಯ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ರಕ್ತಚಂದನದ ತುಂಡುಗಳನ್ನ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ