

ಉಪ್ಪಿನಂಗಡಿ: ಹಾಡಹಗಲೇ ಪುಷ್ಪಲತಾ(34) ಎಂಬ ಗೃಹಿಣಿಯನ್ನು ಉಪ್ಪಿನಂಗಡಿಯಲ್ಲಿ ಕತ್ತು ಇರಿದು ಕೊಲೆಗೈದಿದ್ದ ಪ್ರಕರಣಕ್ಕೆ ಇಂದಿಗೆ ಹತ್ತು ವರ್ಷ ಪೂರ್ಣಗೊಂಡರೂ ಪೊಲೀಸ್ ಇಲಾಖೆಗೆ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೆಬಂಡಾಡಿ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರಾಗಿದ್ದ ಗುರುಮೂರ್ತಿ ಎಂಬುವರ ಮಡದಿ, ಇಬ್ಬರು ಮಕ್ಕಳ ತಾಯಿ ಪುಷ್ಪಲತಾ ಕೊಲೆಗೀಡಾದವರು. ಈಕೆ ಮೈಸೂರು ಮೂಲದವರಾಗಿದ್ದು, ಉಪ್ಪಿನಂಗಡಿ ಕ್ರೈಸ್ತ ದೇಗುಲದ ಒಡೆತನದ ಬಾಡಿಗೆ ಮನೆಯಲ್ಲಿ 5.6.2014ರಂದು ಕತ್ತು ಇರಿಯಲ್ಪಟ್ಟ ಸ್ಥಿತಿಯಲ್ಲಿ ಕೊಲೆಗೀಡಾಗಿದ್ದರು.
ಪತಿ, ಮಕ್ಕಳು ಶಾಲೆಗೆ ಹೋದ ಬಳಿಕ ಎಂದಿನಂತೆ ಬಟ್ಟೆ ಒಗೆಯುವ ಕಾರ್ಯದಲ್ಲಿ ನಿರತರಾಗಿದ್ದ ಈಕೆಯನ್ನು ಹಂತಕ ನೆಂಟನಂತೆಯೋ, ಪರಿಚಯಸ್ಥನಂತೆಯೋ ಬಂದು ಕೊಲೆಗೈದಿರುವ ಸಾಧ್ಯತೆಯನ್ನು ಮನೆಯಲ್ಲಿ ಕಂಡು ಬಂದ ತಂಪು ಪಾನೀಯ ಲೋಟ ಶಂಕಿಸುವಂತೆ ಮಾಡಿತ್ತು. ಅಡುಗೆ ಕೋಣೆಯಲ್ಲಿ ಕೊಲೆಯಾಗಿ ಬಿದ್ದಿದ್ದ ಪುಷ್ಪಲತಾ ಕೊಸರಾಡಿಕೊಂಡ ಅಥವಾ ಸಾವಿನ ಸಂದರ್ಭ ಪ್ರಾಣ ಉಳಿಸಿಕೊಳ್ಳುವ ಸಹಜ ಯತ್ನವನ್ನಾಗಲಿ ಮಾಡಿರುವ ಯಾವ ಕುರುಹೂ ಅಲ್ಲಿ ಕಂಡು ಬಂದಿರಲಿಲ್ಲ. ಕೊಲೆಗೀಡಾದಾಗ ಧರಿಸಿದ ಬಟ್ಟೆಯ ಮೇಲ್ಭಾಗದಲ್ಲಿ ರಕ್ತದ ಕಲೆ ಇರಲಿಲ್ಲ. ಹಂತಕ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಅಥವಾ ಪ್ರಜ್ಞೆ ತಪ್ಪಿಸಿ ಕೊಲೆ ಮಾಡಿರುವ ಸಾಧ್ಯತೆಯನ್ನು ಶಂಕಿಸುವಂತಿತ್ತು.
ಸಹಜವೆಂಬಂತೆ ಈ ಪ್ರಕರಣದಲ್ಲಿ ಸಂಶಯದ ಕಣ್ಣು ಪತಿ ಗುರುಮೂರ್ತಿಯ ಮೇಲೆ ಇತ್ತಾದರೂ, ತನಿಖೆಯಲ್ಲಿ ಪೂರಕ ಮಾಹಿತಿ ಪೊಲೀಸರಿಗೆ ದೊರೆತಿಲ್ಲ. ಕೊಲೆ ನಡೆದ ಸಮಯ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ಮಧ್ಯೆಯಾಗಿದ್ದು, ಈ ಸಮಯದಲ್ಲಿ ಪತಿ ಹಿರೆಬಂಡಾಡಿ ಶಾಲೆಯಲ್ಲೇ ಕರ್ತವ್ಯದಲ್ಲಿರುವುದು ದೃಢಪಟ್ಟಿದೆ. ಪದೇಪದೆ ಖಿನ್ನತೆಗೆ ತುತ್ತಾಗುವ ಪತ್ನಿಯ ಚಿಕಿತ್ಸೆಗೆ ಪತಿ ಬಹಳಷ್ಟು ಶ್ರಮಿಸುತ್ತಿದ್ದುದು, ಆಧ್ಯಾತ್ಮಿಕ ಕಾರ್ಯಗಳಿಗೆ ಕರೆದೊಯ್ಯುತ್ತಿದ್ದುದ್ದು ಕೂಡಾ ಪ್ರಕರಣದಲ್ಲಿ ಪತಿಯ ಪಾತ್ರದ ಸಾಧ್ಯತೆಯನ್ನು ಕ್ಷೀಣಿಸಿತ್ತು.
ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಪ್ರತಿಷ್ಠಿತ ವೈದ್ಯ ಸಂಸ್ಥೆಯಲ್ಲಿ ನಡೆಸಲಾಗಿತ್ತು. ಆದಾಗ್ಯೂ ಮರಣೋತ್ತರ ಪರೀಕ್ಷೆ ತನಿಖೆಯಲ್ಲಿ ಫಲಿತಾಂಶವನ್ನು ಒದಗಿಸಲು ಸಹಕಾರಿಯಾಗಿಲ್ಲ ಎನ್ನುವುದು ಈವರೆಗಿನ ಬೆಳವಣಿಗೆಯಿಂದ ದೃಢಪಟ್ಟಿದೆ.
ವೈದ್ಯರೊಬ್ಬರು ಮಾನಸಿಕ ಖಿನ್ನತೆಯ ವ್ಯಕ್ತಿ ಸ್ವಇಚ್ಛೆಯಿಂದಲೇ ಕುತ್ತಿಗೆಗೆ ಇರಿದು ಸಾವನ್ನಪ್ಪುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಪುಷ್ಪಲತಾ ಪ್ರಕರಣದಲ್ಲಿ ಮಾತ್ರ ಅದು ನಿಜವಲ್ಲ. ಯಾಕೆಂದರೆ ಸ್ವತಃ ಇರಿದು ಸಾವನ್ನಪ್ಪಿದ್ದರೆ ಇರಿದುಕೊಳ್ಳಲು ಬಳಸಿದ್ದ ಆಯುಧವೂ ಪತ್ತೆಯಾಗಬೇಕಿತ್ತು. ಮಾತ್ರವಲ್ಲದೆ ಒಂದೇ ಬಾಗಿಲು ಇರುವ ಈ ಮನೆಯಲ್ಲಿ ಬಾಗಿಲಿಗೆ ಬೀಗ ಹಾಕುವ ಸಾಧ್ಯತೆಯೂ ಇರುತ್ತಿರಲಿಲ್ಲ. ಆ ಮನೆಗೆ ಬರಬಹುದಾಗಿದ್ದ ವ್ಯಕ್ತಿಗಳ ಬಗ್ಗೆ ಸಹಜ ಸಂಶಯ ಮೂಡುತ್ತಿದ್ದು, ಅಪರಿಚಿತರು ಬಂದಿದ್ದಲ್ಲಿ ಅವರನ್ನು ಮನೆಯೊಳಗೆ ಕರೆದು ಪಾನೀಯ ನೀಡುವ ಸಾಧ್ಯತೆ ಇಲ್ಲ. ಬಟ್ಟೆ ಒಗೆಯುವ ಸಂದರ್ಭ ಬಂದಿದ್ದ ಹಂತಕನನ್ನು ಸತ್ಕರಿಸುವ ಸಲುವಾಗಿ ಆಕೆ ಬಟ್ಟೆ ಒಗೆಯುವ ಸ್ಥಳದಿಂದ ಮನೆಗೆ ಹೋಗಿರುವುದು ಕಂಡು ಬಂದಿತ್ತು.
ಇಲಾಖೆ ಬಯಸಿದ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಗೂ ಅವಕಾಶ ದೊರೆಯದೆ ತನಿಖೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಲಿಲ್ಲ. ಪ್ರಕರಣದ ಎಲ್ಲ ಎಳೆಗಳನ್ನು ತನಿಖೆಗೆ ಒಳಪಡಿಸಲಾಗಿದ್ದು, ಹಂತಕರ ಸುಳಿವು ಪಡೆಯಲು ಸಾಧ್ಯವಾಗಲಿಲ್ಲ. ಮೇಲ್ನೋಟಕ್ಕೆ ಇದು ಪತ್ತೆಯಾಗದ ಪ್ರಕರಣವಾಗಿದ್ದರೂ ಪ್ರಸಕ್ತ ಇದು ಅಡಿಷನಲ್ ಎಸ್ಪಿ ಅವರ ನೇತೃತ್ವದ ತನಿಖಾ ವ್ಯಾಪ್ತಿಯಲ್ಲಿದೆ ಎಂದು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸುವಾಗ ಶವದ ಅಂಗಾಂಗಗಳ ಸ್ಥಿತಿಗತಿಯನ್ನಾಧರಿಸಿ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ದಾಖಲಿಸುವುದು ಸಾಮಾನ್ಯ. ಆದರೆ, ಈ ಪ್ರಕರಣದಲ್ಲಿ ವೈದ್ಯಾಧಿಕಾರಿಗಳ ತಂಡವೊಂದು ಘಟನಾ ಸ್ಥಳವನ್ನೂ ಕೂಡಾ ಪರಿಶೀಲನೆ ನಡೆಸಿದೆ. ಇಲ್ಲಿ ಘಟನಾ ಸ್ಥಳದ ಪರಿಶೀಲನೆ ತನಿಖಾಧಿಕಾರಿಗಳಿಗೆ ಪ್ರಮುಖವಾಗಿರುತ್ತದೆಯೇ ವಿನಃ ವೈದ್ಯಾಧಿಕಾರಿಗಳಿಗೆ ಯಾವ ಮಟ್ಟದಲ್ಲಿ ಪ್ರಮುಖವಾಗಿರುತ್ತದೆ ಎನ್ನುವುದು ಅರ್ಥವಾಗದ ವಿಚಾರ.