ವಸತಿ ಶಾಲೆಯಲ್ಲಿ ಬೆಂಕಿಗೆ ವಿದ್ಯಾರ್ಥಿ ಬಲಿ

Pushpak
Published on

ಮಡಿಕೇರಿ:

ಸಮೀಪದ ಕಾಟಕೇರಿ ಗ್ರಾಮದಲ್ಲಿರುವ ಖಾಸಗಿ ಗುರುಕುಲ ಶಾಲೆಯೊಂದರಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಬಾಲಕನೋರ್ವ ಸಜೀವವಾಗಿ ದಹನವಾಗಿದ್ದಾನೆ. ಮೃತನನ್ನು ಭಾಗಮಂಡಲ ಬಳಿಯ ಚೆಟ್ಟಿಮಾನಿ ಗ್ರಾಮದ ಕೇಕಡ ಅನಿಲ್ ಕುಮಾರ್ ಮತ್ತು ತ್ರಿವೇಣಿ ದಂಪತಿ ಪುತ್ರ ಕೆ.ಎ. ಪುಷ್ಪಕ್ (7) ಎಂದು ಗುರುತಿಸಲಾಗಿದೆ. ಈತ ಈ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ.

ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಸಿಬ್ಬಂದಿ ಜತೆ ಸೇರಿ ಕೊಠಡಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಅಗ್ನಿ ಆಕಸ್ಮಿಕ ಸಂಭವಿಸಿದ ಕೊಠಡಿಯಲ್ಲಿ 30 ವಿದ್ಯಾರ್ಥಿಗಳು ಇದ್ದರು. ಆದರೆ ಅಪಾಯದಿಂದ ಪಾರಾದವರಲ್ಲಿ 29 ವಿದ್ಯಾರ್ಥಿಗಳು ಮಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆ ಹುಡುಕಾಡಿದಾಗ ಪುಷ್ಪಕ್ ಮೃತ ದೇಹ ಸುಟ್ಟುಹೋದ ಸ್ಥಿತಿಯಲ್ಲಿ ಕಂಡುಬAದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಚಂದ್ರಶೇಖರ್ ಮತ್ತು ಸಿಬ್ಬಂದಿ, ಅಗ್ನಿಶಾಮಕ ಅಧಿಕಾರಿ ನಾಗರಾಜ್, ಉಪವಿಭಾಗಾಧಿಕಾರಿ ನಿತೀನ್ ಚಕ್ಕಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬAಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಹತ್ತಿಕೊಳ್ಳಲು ಕಾರಣ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net