ಪುಷ್ಪಗಿರಿ ಮಠದಿಂದ ಕಾಯಕ ಸಂಸ್ಕೃತಿ ಬೆಳೆಸುವ ಕೆಲಸ

Pushpagiri Math
Published on

ಹಾನಗಲ್ಲ: ಮಹಿಳೆಯರು ಆರ್ಥಿಕ ಬಲ ಹೊಂದಿದರೆ ಸಂಸ್ಕಾರಯುತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಶ್ರೀಶೈಲ ಪುಷ್ಪಗಿರಿ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಗತಿ ಮೊತ್ತ ವಿತರಣೆ ಹಾಗೂ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪುಷ್ಪಗಿರಿ ಶ್ರೀಮಠ ಸಮಾಜದಲ್ಲಿ ಸಂಸ್ಕಾರ ಬೆಳೆಸುವ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಉದ್ದೇಶ ಹೊಂದಿದೆ. ರಾಜ್ಯದ 20 ತಾಲೂಕುಗಳಲ್ಲಿ ಮಹಿಳಾ ಸಂಘಗಳಿಗೆ 20 ಕೋಟಿ ರೂಪಾಯಿ ಹಣಕಾಸು ನೆರವು ನೀಡಿ, ಅವರ ಸ್ವಾವಲಂಬಿ ಜೀವನಕ್ಕೆ ಪ್ರಯತ್ನಿಸಿದ್ದೇವೆ. ಈ ಸಂಘಗಳು ಈವರೆಗೆ 12 ಕೋಟಿ ರೂಪಾಯಿ ಉಳಿತಾಯ ಮಾಡಿವೆ ಎಂದರು.

ದೇಶದಲ್ಲಿ ಅನ್ಯಧರ್ವಿುಯರು ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ವಿಷಬೀಜ ಬಿತ್ತುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ನಮ್ಮ ಧರ್ಮ ಗಟ್ಟಿಗೊಳಿಸಲು ಸಂಘಟನೆಯಾಗಬೇಕಿದೆ. ಎಲ್ಲ ಮಠಗಳು ಮನಸು ಮಾಡಿದರೆ ಇದು ಸಾಧ್ಯವಾಗುತ್ತದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಕಾರಾತ್ಮಕ ಚಿಂತನೆಗಳೇ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಪುಷ್ಪಗಿರಿ ಮಠ ಸಕಾರಾತ್ಮಕವಾಗಿ ಮೌನ ಕ್ರಾಂತಿ ಆರಂಭಿಸಿದೆ. ಪುಷ್ಪಗಿರಿ ಮಹಿಳಾ ಸಂಘಗಳಿಗಾಗಿ ಶ್ರೀಮಠಕ್ಕೆ ನಮ್ಮ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್​ನಿಂದ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆ ಎಂದು ಘೋಷಿಸಿದರು.

ಶ್ರೀಶೈಲ ಪುಷ್ಪಗಿರಿ ಜಗದ್ಗುರು ಸೋಮಶೇಖರ ಶಿವಾಚಾರ್ಯರಿಗೆ ಗುರುವಂದನೆ ಹಾಗೂ ಹಾನಗಲ್ಲ ತಾಲೂಕಿನ 25 ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ 2 ಲಕ್ಷ ರೂಪಾಯಿ ಪ್ರಗತಿ ಮೊತ್ತ ವಿತರಿಸಲಾಯಿತು.

ಹೋತನಹಳ್ಳಿಯ ಶಂಕರಾನಂದ ಸ್ವಾಮೀಜಿ, ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಕೀಲ ಬಿ.ಎಸ್.ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶ್ರೀನಿವಾಸ ಮಾನೆ, ಜಿಪಂ ಮಾಜಿ ಸದಸ್ಯ ಬಸವರಾಜ ಹಾದಿಮನಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಸಿದ್ದಲಿಂಗಪ್ಪ ಕಮಡೊಳ್ಳಿ, ಪದ್ಮನಾಭ ಕುಂದಾಪುರ, ರಾಜಶೇಖರಗೌಡ ಕಟ್ಟೆಗೌಡರ, ಮಹೇಶ ಕಮಡೊಳ್ಳಿ, ಶಂಕರಗೌಡ ಪಾಟೀಲ, ವೀರಣ್ಣ ಕಡ್ಲಿ, ಪುರಸಭೆ ಸದಸ್ಯರಾದ ಶೋಭಾ ಉಗ್ರಣ್ಣನವರ, ವಿರೂಪಾಕ್ಷಪ್ಪ ಕಡಬಗೇರಿ, ತಹಸೀಲ್ದಾರ್ ಎಸ್. ರೇಣುಕಾ, ಶಂಕ್ರಪ್ಪ ಹಾದಿಮನಿ, ಬಸವರಾಜ ಹಾದಿಮನಿ, ಮಹೇಶ ಬಣಕಾರ, ಶಂಕರಗೌಡ ಪಾಟೀಲ, ಅಜ್ಜಪ್ಪ ಬಾಗಿಲದವರ, ಸತೀಶ ಆಡೂರ, ಹರೀಶ ಕೊಪ್ಪದ, ಚನ್ನಬಸನಗೌಡ ಪಾಟೀಲ, ನಾಗಯ್ಯ, ಪರಮೇಶ, ಶಿವಲಿಂಗಪ್ಪ ತಲ್ಲೂರ ಪಾಲ್ಗೊಂಡಿದ್ದರು. ಜಗದೀಶ ಮಡಿವಾಳರ ಪ್ರಾರ್ಥಿಸಿದರು. ಪ್ರವೀಣ ಬ್ಯಾತನಾಳ, ಕುಮಾರ ಸೋಮಸಾಗರ, ಶಂಕರ ಕಡ್ಲಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net