ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ

12hbd1..
Published on

 ಹಳೇಬೀಡು: ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ರಥೋತ್ಸವದ ಪ್ರಯುಕ್ತ ಮಂಗಳವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಧ್ವಜಾರೋಹಣ, ಅಂಕುರಾರ್ಪಣ ನೆರವೇರಿದ ಬಳಿಕ ರಾತ್ರಿ ದೇಗುಲದ ನವರಂಗ ಮಂಟಪದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಯಿತು. ಸುತ್ತಲಿನ ಹಳ್ಳಿಗಳಿಂದ ಬಂದಿದ್ದ ಮಹಿಳೆಯರು ಜಾನಪದ ಶೈಲಿಯ ಗೀತೆಗಳನ್ನು ಹಾಡಿಕೊಂಡು ಭತ್ತ ಕುಟ್ಟುವುದು, ಅಕ್ಕಿ ಬೀಸುವುದು ಹಾಗೂ ಪಾರ್ವತಿ ಪರಮೇಶ್ವರ ದೇವರನ್ನು ಕಲ್ಯಾಣ ಮಂಟಪಕ್ಕೆ ಕರೆತರುವ ಶಾಸ್ತ್ರಗಳನ್ನು ಬೆಳಗಿನವರೆಗೆ ನಡೆಸಿಕೊಟ್ಟರು.

ಬುಧವಾರ ಮುಂಜಾನೆ ಮೂಲ ಮಲ್ಲಿಕಾರ್ಜುನ ಸ್ವಾಮಿ ಲಿಂಗಕ್ಕೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇವೆಗಳನ್ನು ಸಲ್ಲಿಸಲಾಯಿತು.

ರಥ ಸಂಪ್ರೋಕ್ಷಣೆ ಹಾಗೂ ದಿಗ್ಬಲಿಯ ಬಳಿಕ ವೈದಿಕರ ವೇದಘೋಷಗಳೊಂದಿಗೆ ಶುಭಲಗ್ನದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಮ್ಮನವರ ಉತ್ಸವಮೂರ್ತಿಗಳನ್ನು ಆರೋಹಣ ಮಾಡಿ ಸಂಪ್ರದಾಯದಂತೆ ಬಾಳೆಕಂದು ಕತ್ತರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಸುತ್ತ ಜಮಾಯಿಸಿದ್ದ ಸಾವಿರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ತೇರನ್ನು ಪ್ರಾಂಗಣದ ಸುತ್ತ ಎಳೆದು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ದೇವರ ಒಕ್ಕಲು ಮನೆತನದ ಹಳೇಬೀಡು ಹೋಬಳಿಯ ಹತ್ತು ಹಳ್ಳಿಯ ಜನತೆ ರಥಕ್ಕೆ ಬಾಳೆಹಣ್ಣು, ಹೂವು, ಬಿಲ್ವಪತ್ರೆ ಎಸೆದು ಭಕ್ತಿ ಅರ್ಪಿಸಿದರು.

ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ತಟ್ಟೆಹಳ್ಳಿ ಶಾನುಭೋಗರ ವಂಶಸ್ಥರು, ಹಳೇಬೀಡು ಬ್ರಾಹ್ಮಣ ಮಹಾಸಭಾ ಹಾಗೂ ಗಿರಿಸ್ಥಳದ ಹತ್ತುಹಳ್ಳಿಯ ಜನರ ಸಹಕಾರದೊಂದಿಗೆ ನಡೆದ ರಥೋತ್ಸವದಲ್ಲಿ ದೇಗುಲ ಸಮಿತಿ ಅಧ್ಯಕ್ಷ ಸೋಮಸುಂದರ್, ನಿರ್ದೇಶಕ ಸಂಗಮ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಎಂ. ಮಮತಾ ಹಾಗೂ ಕಚೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net