ಕೊಡೂರಲ್ಲಿ ವೀರಮಾಸ್ತಿಕಲ್ಲು ಗಳ ಅಧ್ಯಯನ

kpp1 (6)
Published on

ಕೊಪ್ಪ: ಶಾನುವಳ್ಳಿ ಗ್ರಾಪಂ ವ್ಯಾಪ್ತಿಯ ಕೊಡೂರು ಪ್ರದೇಶದಲ್ಲಿ ವೀರಮಾಸ್ತಿಕಲ್ಲು ಪತ್ತೆಯಾಗಿದ್ದು, ಇತಿಹಾಸ ಮತ್ತು ಪುರಾತತ್ವ ಸಂಶೋದನಾರ್ಥಿ ನ.ಸುರೇಶ ಕಲ್ಕೆರೆ ಇದರ ಅಧ್ಯಯನ ನಡೆಸಿದ್ದಾರೆ.

ಈ ವೀರಮಾಸ್ತಿಕಲ್ಲು 6 ಅಡಿ ಎತ್ತರ ಮತ್ತು 2.5 ಅಡಿ ಅಗಲ ವಾಗಿದ್ದು, ವಿವಿಧ ಪುಷ್ಪಾ ಪಟ್ಟಿಕೆಗಳಿಂದ ಅಲಂಕರಿಸಲ್ಪಟ್ಟಿದೆ. ಐದು ಪಟ್ಟಿಕೆಗಳನ್ನು ಹೊಂದಿದ್ದು, ಪ್ರಥಮ (ಕೆಳಗಿನ) ಪಟ್ಟಿಕೆಯಲ್ಲಿ ಬಿಲ್ಲು-ಬಾಣ, ಕತ್ತಿ-ಗುರಾಣಿಗಳೊಂದಿಗೆ ರಣರಂಗದಲ್ಲಿ ಎದುರಾಳಿ ಸೈನ್ಯದೊಂದಿಗೆ ವೀರನು ಹೋರಾಟ ಮಾಡುವ ಯುದ್ಧ ಸನ್ನಿವೇಶ ಕೆತ್ತಲಾಗಿದೆ. ಈ ಯುದ್ಧದಲ್ಲಿ ವೀರಮರಣ ಹೊಂದಿದ ವೀರನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕೊಂಡೊಯ್ಯುತ್ತಿರುವ ಕೆತ್ತನೆಯನ್ನು ಇದರ ನಂತರದ ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಮೂರನೇ ಪಟ್ಟಿಕೆಯಲ್ಲಿ ಮರಣಹೊಂದಿದ ಪತಿಯೊಂದಿಗೆ ಸತಿಯರ ಚಿತ್ರಣ ಬಿಂಬಿಸಲಾಗಿದೆ. ನಂತರದ ಪಟ್ಟಿಕೆಯಲ್ಲಿ ಕುಂಭ-ಪದ್ಮದ ಜತೆ ಒಕೈಯಲ್ಲಿ ಲಿಂಬೆಯನ್ನು ಹಿಡಿದಿರುವ ಕೆತ್ತನೆ ಜತೆಗೆ ಸತಿ ಪತಿ ಕೈಮುಗಿದು ಕೆತ್ತನೆ ಮಾಡಲಾಗಿದೆ.

ಕೊನೆ ಪಟ್ಟಿಕೆಯಲ್ಲಿ ಅಂಜಲಿ ಮುದ್ರೆಯಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಸತಿ ಪತಿಯರ ಜತೆಗೆ ಶಿವಲಿಂಗಕ್ಕೆ ಪೂಜಿಸುತ್ತಿರುವ ಯೋಗಿಯ ಕೆತ್ತನೆಯಿದೆ. ಈ ವೀರ ಮತ್ತು ಸತಿಯ ತ್ಯಾಗ ಬಲಿದಾನವು ಅಜರಾಮರವಾಗಿರಬೇಕೆಂದು ಸೂರ್ಯ-ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ. ಈ ವೀರಮಾಸ್ತಿಗಲ್ಲು 15-16ನೇ ಶತಮಾನಕ್ಕೆ ಸೇರುತ್ತದೆ. ವೀರಮಾಸ್ತಿಕಲ್ಲಿನ ತಳಭಾಗದಲ್ಲಿ ವಿವಿಧ ಗಾತ್ರದ ಮಡಕೆಗಳು ಲಭ್ಯವಾಗಿದ್ದು ಇವುಗಳು ನಂತರದ ಕಾಲದಲ್ಲಿ ಅಂದರೆ ಸುಮಾರು 17-18ನೇ ಶತಮಾನಕ್ಕೆ ಸೇರಿರುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net