

ಕೋಲಾರ: ಜಿಲ್ಲೆಯ 26 ಕೇಂದ್ರಗಳಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಗೂ ಮುನ್ನ ಮಕ್ಕಳಲ್ಲಿ ಪರಸ್ಪರ ಅಂತರ ಮರೆಯಾಗಿತ್ತು. ನಗರದ ಕೋವಿಡ್ ಆಸ್ಪತ್ರೆ ಎದುರಿಗಿನ ಮಹಿಳಾ ಸಮಾಜ ಶಾಲೆಯ 880 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿತ್ತು. ಬೆಳಗ್ಗೆ 8.30ರಿಂದಲೇ ವಿದ್ಯಾರ್ಥಿಗಳು ಜಮಾಯಿಸಿದ್ದರು, ಇವರ ಜತೆಗೆ ಪಾಲಕರೂ ಬಂದಿದ್ದರು. ಪರೀಕ್ಷಾ ಕೇಂದ್ರದ ಗೇಟ್‌ನಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಬೇಕಾಗಿತ್ತು. ಆದರೆ ಪಿಯು ಇಲಾಖೆ ಹಾಗೂ ಪರೀಕ್ಷಾ ಕೇಂದ್ರದ ಉಸ್ತುವಾರಿಗಳ ನಿರ್ಲಕ್ಷ್ಯದಿಂದ ನೂರಾರು ವಿದ್ಯಾರ್ಥಿಗಳು ನೂಕು ನುಗ್ಗಲಿನಲ್ಲೇ ಕೇಂದ್ರ ಪ್ರವೇಶಿಸುವಂತಾಯಿತು.
ಅವ್ಯವಸ್ಥೆ ಬಗ್ಗೆ ಪಾಲಕರೊಬ್ಬರು ಆಡಳಿತ ಮಂಡಳಿಯನ್ನು ಪ್ರಶ್ನಿಸಿದಾಗ ನಿಮ್ಮ ಮುಂದೆಯೇ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕಾ? ಕೊಠಡಿಗಳಲ್ಲಿ ಸ್ಕ್ರೀನಿಂಗ್ ಮಾಡುತ್ತೇವೆ ಎಂಬ ಉದ್ಧಟತನದ ಉತ್ತರ ಕೇಳಿ ಬಂತು. ಆದರೆ ಕಾಂಪೌಂಡ್‌ನೊಳಗೆ ಪರಸ್ಪರ ಅಂತರಕ್ಕೆ ಬಾಕ್ಸ್ ಹಾಕಿ ವಿದ್ಯಾರ್ಥಿಗಳನ್ನು ನಿಲ್ಲಿಸಲಾಯಿತು.
ಪರೀಕ್ಷೆಗೆ ಹೊರ ರಾಜ್ಯಗಳ 66 ಅಭ್ಯರ್ಥಿಗಳು ಆಗಮಿಸಿದ್ದು, ಕೋವಿಡ್ ಸೋಂಕು ಎಲ್ಲಿ ಹರಡುವುದೋ ಎಂಬ ಭಯವೂ ಕಾಡುವಂತಾಗಿದೆ.
730 ಮಂದಿ ಗೈರು: ಪರೀಕ್ಷೆಗೆ ಒಟ್ಟು 14943 ವಿದ್ಯಾರ್ಥಿಗಳು ನೋಂದಾಯಿಸಿದ್ದು, 730 ಮಂದಿ ಗೈರಾಗಿ 14213 ಮಂದಿ ಪರೀಕ್ಷೆ ಬರೆದರು. ಹೊರ ಜಿಲ್ಲೆಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ 14564 ಮಂದಿ ನೋಂದಾಯಿಸಿದ್ದು, ಅವರಲ್ಲಿ 726 ಮಂದಿ ಗೈರಾಗಿ 12838 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಅಂತರ ಜಿಲ್ಲಾ ಕೇಂದ್ರಗಳಲ್ಲಿ ನೋಂದಾಯಿಸಿರುವ 379 ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದು, ಅವರಲ್ಲಿ 4 ಮಂದಿ ಗೈರಾಗಿ ಉಳಿದ 375 ಮಂದಿ ಪರೀಕ್ಷೆ ಎದುರಿಸಿದರು.
ಕಂಟೇನ್ಮೆಂಟ್ ಏರಿಯಾದಲ್ಲೇ ಕೇಂದ್ರ: ನಗರದ ಗೋಕುಲ್ ಕಾಲೇಜು ರಸ್ತೆ ಕಂಟೇನ್ಮೆಂಟ್ ಪ್ರದೇಶದಲ್ಲಿದ್ದು, ಗೋಕುಲ್ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದರಿಂದ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕಂಟೇನ್ಮೆಂಟ್ ಜೋನ್ ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲಾಧಿಕಾರಿ ಭೇಟಿ: ನಗರದ ಮಹಿಳಾ ಸಮಾಜ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಡಿಸಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲಿಸಿದರು. ನಂತರ ಹೊರರಾಜ್ಯದ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿ, ಪವನ್ ಪ್ರಕೃತಿ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೂ ಭೇಟಿ ನೀಡಿದರು. ಮಹಿಳಾ ಸಮಾಜ ಶಾಲೆಯ ಕೇಂದ್ರದಲ್ಲಿ ಅಂಧ ವಿದ್ಯಾರ್ಥಿನಿ ಬೇರೆಯವರ ಸಹಾಯದಿಂದ ಪರೀಕ್ಷೆ ಬರೆಯುತ್ತಿರುವುದನ್ನು ವೀಕ್ಷಿಸಿದರು.
ಹೊರಗಡೆ ಏನಾಗಿತ್ತೆಂದು ತಿಳಿದಿಲ್ಲ, ಕೇಂದ್ರದೊಳಗೆ ಅಚ್ಚುಕಟ್ಟಾಗಿ ವ್ಯವಸ್ಥೆಯಾಗಿದೆ, ಮಕ್ಕಳು ಪರಸ್ಪರ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಪರೀಕ್ಷೆ ಬರೆದಿದ್ದಾರೆ. ಸಿ. ಸತ್ಯಭಾಮ, ಡಿಸಿ ಕೋಲಾರ