

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ- ಮಿತ್ರರೂ ಅಲ್ಲ ಎಂಬುದು ಕಾಲಕಾಲಕ್ಕೆ ಸಾಬೀತಾಗುತ್ತ ಬಂದಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಜಿದ್ದಾಜಿದ್ದಿ ರಾಜಕಾರಣ ನಡೆಸಿದ್ದ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಬದಲಾದ ರಾಜಕೀಯ ಸ್ಥಿತಿಯಲ್ಲಿ ಹಸ್ತ ಲಾಘವಕ್ಕೆ ಮುಂದಾಗಿದ್ದಾರೆ.
ತನ್ನ ತಂದೆ ದಿ. ಎ.ಕೃಷ್ಣಪ್ಪ ಹಾಗೂ ತನ್ನ ಎದುರಾಳಿ ಹಾಲಿ ಸಚಿವ ಡಿ.ಸುಧಾಕರ್ ಅವರ ವಿರುದ್ಧ ಸೆಣೆಸಿದ್ದು ಇದೀಗ ಇತಿಹಾಸ. ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿರುವುದು ವಾಸ್ತವ. ಈ ಬೆಳವಣಿಗೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿಯಿಂದ ಗೆಲುವು ಸಾಧಿಸಿ ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆ ಪಡೆದಿದ್ದ ಪೂರ್ಣಿಮಾ, ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಲು ಮಾತುಕತೆ ನಡೆದಿತ್ತಾದರೂ ಹಿರಿಯೂರು ಟಿಕೆಟ್ ಖಾತ್ರಿಯಾಗದ ಕಾರಣ ಬಿಎಸ್‌ವೈ -ಬೊಮ್ಮಾಯಿ ಮಾತಿಗೆ ಮನ್ನಣೆ ನೀಡಿ ಕಮಲ ಪಾಳಯದಲ್ಲೇ ಉಳಿದಿದ್ದರು.
ಬೆಂಗಳೂರಿನಲ್ಲಿರುವ ಪೂರ್ಣಿಮಾ ನಿವಾಸದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಕಾರ್ಯದಲ್ಲಿ ಡಿಸಿಎಂ ಡಿಕೆಶಿ ಪಾಲ್ಗೊಂಡಾಗಲೇ ಕೈ ಸೇರ್ಪಡೆ ಖಚಿತ ಎಂಬ ಸುದ್ದಿ ಹರಿದಾಡಿತ್ತು. ಬಿಜೆಪಿ ತೊರೆಯುವ- ಕಾಂಗ್ರೆಸ್ ಸೇರುವ ಕುರಿತು ಕಳೆದ ಆರು ತಿಂಗಳ ತಾಕಲಾಟದಲ್ಲಿದ್ದ ಪೂರ್ಣಿಮಾ, ಕುಟುಂಬದ ಅಪೇಕ್ಷೆ, ಹಿತೈಷಿಗಳ ಒತ್ತಾಸೆಗೆ ಮನ್ನಣೆ ನೀಡಿ ಕೊನೆಗೂ ಕಾಂಗ್ರೆಸ್‌ನತ್ತ ವಾಲಿದ್ದಾರೆ.
*ಬಿಜೆಪಿ ತೊರೆಯಲು ಕಾರಣ: ಪತಿ ಡಿ.ಟಿ.ಶ್ರೀನಿವಾಸ್ ಅವರ ರಾಜಕೀಯ ಭವಿಷ್ಯ ಹಾಗೂ ಕಾಂಗ್ರೆಸ್ ಆಫರ್ ಜತೆಗೆ ಬಿಜೆಪಿಯಲ್ಲಿ ನಡೆದಿದ್ದ ಒಂದಷ್ಟು ಘಟನೆಗಳು ಪಕ್ಷ ನಿಷ್ಠರಾಗಿದ್ದ ಪೂರ್ಣಿಮಾಗೆ ಸರಿ ಬರಲಿಲ್ಲ. ಪಕ್ಷದಲ್ಲಿ ತಮ್ಮ ಅಭಿಪ್ರಾಯಗಳಿಗೆ ಬೆಲೆ ನೀಡಲಿಲ್ಲ ಎಂಬ ಅಸಮಾಧಾನ, ಪರಿಷತ್ ಚುನಾವಣೆಯಲ್ಲಿ ಪತಿಗೆ ಅವಕಾಶ ನೀಡದ ಬೇಸರ, ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ಸಿಕ್ಕೇ ಬಿಟ್ಟಿತು ಎಂಬ ಹಂತದಲ್ಲಿ ಕೈ ತಪ್ಪಿದ ನಿರಾಸೆ. ಈ ಕಾರಣಗಳಿಂದ ಬಿಜೆಪಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಹಿರಿಯೂರಿನ ರಾಜಕೀಯದಲ್ಲಿ ಹಾವು-ಮುಂಗಸಿಯಂತೆ ಬದ್ಧ ರಾಜಕೀಯ ವೈರಿಗಳಾಗಿ ಗುದ್ದಾಟ ನಡೆಸಿದ್ದ, ಸಚಿವ ಡಿ.ಸುಧಾಕರ್- ಪೂರ್ಣಿಮಾ ಈಗ ಒಂದೇ ಪಕ್ಷದಲ್ಲಿ ಒಗ್ಗೂಡಿ ಹೆಜ್ಜೆ ಹಾಕಬೇಕಿದೆ. ಭವಿಷ್ಯದಲ್ಲಿ ಇಬ್ಬರ ಬೆಂಬಲಿಗರು ಕೈ ಬಲಪಡಿಸುವತ್ತ ಹೆಜ್ಜೆ ಹಾಕುತ್ತಾರೋ ಎಂಬ ಕುತೂಹಲಕ್ಕೆ ಕಾಲವೇ ಉತ್ತರ ಹೇಳಬೇಕು.
ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾದವ ಮತಗಳು ನಿರ್ಣಾಯಕ. ಸಮುದಾಯದ ಪ್ರಬಲ ನಾಯಕಿಯಾಗಿರುವ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆಯಿಂದ ಆ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪುನರ್ಜನ್ಮ ನೀಡಿದ್ದ ಹಿರಿಯೂರು: ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಅಕಾಲಿಕ ಮರಣದ ನಂತರ ಪುತ್ರಿ ಪೂರ್ಣಿಮಾ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಹಿರಿಯೂರು ಕ್ಷೇತ್ರ. ಇದಕ್ಕೆ ಸಾಥ್ ನೀಡಿದ್ದು ಬಿಎಸ್‌ವೈ ಎಂಬುದು ವಿಶೇಷ.
ಪರಿಷತ್ ಚುನಾವಣೆ ಮೇಲೆ ಕಣ್ಣು: ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್, ಆಡಳಿತ ಪಕ್ಷದಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂದರಿತು ಕೈ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ರಾಜಕೀಯ ಕುಟುಂಬದ ಹಿನ್ನೆಲೆಯ ಪೂರ್ಣಿಮಾ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ಭರವಸೆಯೂ ಸಿಕ್ಕಿದೆ ಎನ್ನಲಾಗಿದೆ.
ಬೆಂಬಲಿಗರ ಸಭೆ: ಕಾಂಗ್ರೆಸ್ ಸೇರ್ಪಡೆಗೆ ಆ.20ರಂದು ಮುಹೂರ್ತ ನಿಗದಿಯಾದ ಹಿನ್ನೆಲೆಯಲ್ಲಿ ಅ.10 ಮಂಗಳವಾರ ಹಿರಿಯೂರಿನಲ್ಲಿ ಪೂರ್ಣಿಮಾ ಬೆಂಬಲಿಗರ ಸಭೆ ಕರೆಯಲಾಗಿದೆ.
ನನ್ನ ವಿರೋಧ ಇಲ್ಲ: ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸಿಎಂ-ಡಿಸಿಎಂ ಜತೆ ಮಾತುಕತೆ ನಡೆಸಿರುವ ಕೆ.ಪೂರ್ಣಿಮಾ ಅವರು ಅ.20ರಂದು ಪಕ್ಷ ಸೇರ್ಪಡೆಯಾಗುತ್ತಿರುವುದು ನನ್ನ ಗಮನಕ್ಕಿದೆ. ಪಕ್ಷ ಯಾವುದನ್ನೂ ಮುಚ್ಚಿಟ್ಟಿಲ್ಲ. ಅವರ ಸೇರ್ಪಡೆಗೆ ನನ್ನ ವಿರೋಧವಿಲ್ಲ.-ಡಿ.ಸುಧಾಕರ್, ಜಿಲ್ಲಾ ಸಚಿವ
ಜನಪರ ಆಡಳಿತಕ್ಕೆ ಮನಸೋತೆ: ಜಾತ್ಯತೀತ ತತ್ವ-ಸಾಮಾಜಿಕ ನ್ಯಾಯದ ಸಿದ್ಧಾಂತವೇ ಕಾಂಗ್ರೆಸ್ ಜೀವಾಳ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಎಲ್ಲ ಜಾತಿ, ಧರ್ಮದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜನಪರ ಆಡಳಿತ ಮೆಚ್ಚಿ ಅ.20ರಂದು ನನ್ನ ಗೂಡಿಗೆ ಮರಳುತ್ತಿದ್ದೇನೆ.- ಕೆ.ಪೂರ್ಣಿಮಾ. ಮಾಜಿ ಶಾಸಕಿ