ಅಗ್ನಿಹೋತ್ರ ಅಭ್ಯಾಸದಿಂದ ಮನಸ್ಸು, ವಾತಾವರಣ ಶುದ್ಧಿ

h1-patanjali
Published on

ಹುಬ್ಬಳ್ಳಿ: ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಇಲ್ಲಿಯ ಬಸವೇಶ್ವರ ನಗರದ ಸಮುದಾಯ ಭವನದಲ್ಲಿ ಗುರುವಾರ ಸಾಮೂಹಿಕ ಅಗ್ನಿಹೋತ್ರ (71 ಹೋಮ ಕುಂಡಗಳು ) ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪತಂಜಲಿ ಯೋಗ ಪೀಠ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಮಾತನಾಡಿ, ಅಗ್ನಿಹೋತ್ರ ಅಭ್ಯಾಸವು ಒಂದು ವೈಜ್ಞಾನಿಕ ಪದ್ಧತಿ. ಇದಕ್ಕೆ ಯಾವುದೇ ಜಾತಿ, ಕುಲ, ಧರ್ಮ, ದೇಶದ ಭೇದಭಾವವಿಲ್ಲ. ಎಲ್ಲರೂ ಅಗ್ನಿಹೋತ್ರ ಅಭ್ಯಾಸ ಮಾಡಬಹುದು. ಅಗ್ನಿಹೋತ್ರ ಅಭ್ಯಾಸದಿಂದ ನಮ್ಮ ದೇಹ, ಮನಸ್ಸು ಶುದ್ಧಿಯಾಗುತ್ತದೆ. ನಮ್ಮ ಸುತ್ತಮುತ್ತಲಿನ ವಾತಾವರಣವೂ ಶುದ್ಧಿಯಾಗುತ್ತದೆ. ಹೀಗಾಗಿ ಇಂದು ಅಗ್ನಿಹೋತ್ರ ಕೇವಲ ಆಚರಣೆ ಅಥವಾ ಅಭ್ಯಾಸವಾಗಿ ಉಳಿಯದೇ ಅಗ್ನಿಹೋತ್ರವು ಥೆರಪಿ, ಚಿಕಿತ್ಸಾ ಪದ್ಧತಿಯಾಗಿದೆ ಎಂದರು.
ಪತಂಜಲಿ ರಿಸರ್ಚ್ ಫೌಂಡೇಷನ್‌ನವರು ಹರಿದ್ವಾರದಲ್ಲಿ ಸಂಶೋಧನೆ ಮಾಡಿ ರೋಗಗಳಿಗೆ ಅನುಗುಣವಾಗಿ ಅಗ್ನಿಹೋತ್ರದ ಸಾಮಗ್ರಿಗಳನ್ನು ಸಂಶೋಧಿಸಿದ್ದಾರೆ. ಈ ಮೆಡಿಸಿನಲ್ ಸಾಮಗ್ರಿಗಳನ್ನು ಅಗ್ನಿಹೋತ್ರ ಅಭ್ಯಾಸದಲ್ಲಿ ಉಪಯೋಗಿಸಿ ಜತೆಗೆ ಪ್ರಾಣಾಯಾಮ ಮಾಡಿದರೆ ದೀರ್ಘಕಾಲಿಕ ರೋಗಗಳು ಗುಣವಾಗುತ್ತದೆ. ಇಂತಹ ಪ್ರತ್ಯಕ್ಷ ಉದಾಹರಣೆಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಗ್ನಿಹೋತ್ರದಲ್ಲಿ ಸಮರ್ಪಿಸುವ ದೇಸಿ ಹಸುವಿನ ತುಪ್ಪವು ವಾತಾವರಣಕ್ಕೆ ಆಮ್ಲಜನಕ ಬಿಡುಗಡೆ ಮಾಡುತ್ತದೆ. 100 ದಿನಗಳ ಕಾಲ ನಿರಂತರವಾಗಿ ಭಾರತೀಯರೆಲ್ಲರೂ ಅಗ್ನಿಹೋತ್ರ ಅಭ್ಯಾಸ ಮಾಡಿದರೆ ಗ್ಲೋಬಲ್ ವಾರ್ಮಿಂಗ್ ಸಮಸ್ಯೆ ಸರಿಪಡಿಸಬಹುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಗ್ನಿಹೋತ್ರ ನಮ್ಮ ಸನಾತನ ಪರಂಪರೆ. ಮನೆ, ಮನೆಗಳಲ್ಲಿ ಪ್ರತಿ ದಿನ ಅಗ್ನಿಹೋತ್ರ ಅಭ್ಯಾಸ ಮಾಡಿ ಎಂದು ವಿನಂತಿಸಿದರು.
ಮೇಯರ್ ವೀಣಾ ಬರದ್ವಾಡ ಮಾತನಾಡಿ, ಎಲ್ಲ ವಾರ್ಡ್‌ಗಳಲ್ಲಿ ನಿರಂತರ ಉಚಿತ ಯೋಗ ಕೇಂದ್ರ ಮತ್ತು ಅಗ್ನಿಹೋತ್ರ ಅಭ್ಯಾಸ ನಿರಂತರವಾಗಿ ನಡೆಯುವಂತೆ ಮಾಡುತ್ತೇನೆ ಎಂದರು.
ಈ ಪವಿತ್ರ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಒಟ್ಟು 71 ಹೋಮ ಕುಂಡಗಳ ಅಗ್ನಿಹೋತ್ರ ಅನುಷ್ಠಾನವಾಯಿತು.
ಮಹಿಳಾ ಪತಂಜಲಿಯ ಜಿಲ್ಲಾ ಪ್ರಭಾರಿ ಪೂರ್ಣಿಮಾ ಮತ್ತು ಬಸವರಾಜ ಹರವಿ, ಮಹಿಳಾ ಪತಂಜಲಿ ಉತ್ತರ ಕರ್ನಾಟಕದ ರಾಜ್ಯ ಪ್ರಭಾರಿ ಆರತಿ ಮತ್ತು ಅಮರೆಂದ್ರ ಕಾನಗೋ, ಪಾಲಿಕೆ ಸದಸ್ಯೆ ಅಕ್ಷತಾ ಅಸುಂಡಿ, ಪತಂಜಲಿ ಪರಿವಾರದ ಅನುಷಾ ಅಗಸನಕೊಪ್ಪ, ನಿರ್ಮಲಾ ಕಮತಗಿ, ಪಂಕಜಾ ತರ್ಲಗಟ್ಟಿ, ಸುಮಂಗಲಾ ಅಸುಂಡಿ, ನೇತ್ರಾ ಸುರೇಬಾನ, ಗೀತಾ ಕಮ್ಮಾರ, ಶಿಲ್ಪಾ ಹೆಬ್ಬಳ್ಳಿ, ಶಿಲ್ಪಾ ಅರಸನಾಲ್, ವಾಮನ ಶಾನಭಾಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net