

ಬೈಂದೂರು: ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ಮೊದಲ ಆದ್ಯತೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ರೂ.200 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬೈಂದೂರಿನಲ್ಲಿ ಬುಧವಾರ ಪಟ್ಟಣ ಪಂಚಾಯಿತಿ, ಮೆಸ್ಕಾಂ ಸಬ್‌ಸ್ಟೇಷನ್ ಉದ್ಘಾಟನೆ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ವಿಶೇಷ ಆದ್ಯತೆ ನೀಡಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಖಾಲಿ ಜಾಗ ಗುರುತಿಸಿ, ನಿವೇಶನ ರಹಿತರಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪಟ್ಟಣ ಪಂಚಾಯಿತಿಗೆ ಹೆಚ್ಚು ಅನುದಾನ ಬರುವ ಉದ್ದೇಶದಿಂದ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಸಮಗ್ರ ಅಭಿವೃದ್ಧಿ ಕಾರ್ಯ ನಡೆಯಲಿವೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ ಸಂಕಲ್ಪ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಂದೂರು ಕ್ಷೇತ್ರಕ್ಕೆ ರೂ.1500 ಕೋಟಿಗೂ ಅಧಿಕ ಅನುದಾನ ದೊರೆತಿದೆ. ಕಂದಾಯ ಸಾಧನೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಬೈಂದೂರಿನಲ್ಲಿ ಕೈಗಾರಿಕಾ ವಲಯ, ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಜಗದೀಶ, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಅಗ್ನಿಶಾಮಕ ದಳ ಮಂಗಳೂರು ವಲಯಾಧಿಕಾರಿ ತಿಪ್ಪೇಸ್ವಾಮಿ, ಸಿಎಂ ಕಾರ್ಯದರ್ಶಿ ರಾಜಪ್ಪ, ಎಸಿ ಕೆ.ರಾಜು, ಜಿಲ್ಲಾ ನಗರ ಯೋಜನಾಧಿಕಾರಿ ಅರುಣಪ್ರಭಾ, ಜಿಪಂ ಸದಸ್ಯರಾದ ಶಂಕರ ಪೂಜಾರಿ, ಕೆ.ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ಶೋಭಾ ಪುತ್ರನ್, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕೊಡೇರಿ ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಿಸಲಾಯಿತು.
ತಹಸೀಲ್ದಾರ ಬಸಪ್ಪ ಪೂಜಾರ್ ಸ್ವಾಗತಿಸಿ, ಮೆಬಲ್ ಡಿಸೋಜ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವಿನಾಯಕ್ ಕಾಮತ್ ವಂದಿಸಿದರು.
ಅಗ್ನಿಶಾಮಕ ಠಾಣೆ ಉದ್ಘಾಟನೆ: ಬೈಂದೂರಿನ ತಾತ್ಕಾಲಿಕ ಅಗ್ನಿಶಾಮಕ ಠಾಣೆಯನ್ನು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ರಾಜ್ಯದಲ್ಲಿ 10 ನೂತನ ಅಗ್ನಿಶಾಮಕ ಠಾಣೆ ಮಂಜೂರು ಮಾಡಿದ್ದು, ರೂ.25 ಕೋಟಿ ಅನುದಾನ ನೀಡಲಾಗಿದೆ. ಇಲಾಖೆಯನ್ನು ಆಧುನಿಕ ವ್ಯವಸ್ಥೆಗೆ ಪರಿವರ್ತಿಸಲಾಗುತ್ತಿದೆ. ಶೀಘ್ರದಲ್ಲಿ ಬೈಂದೂರಿನಲ್ಲಿ ಇಲಾಖೆಯ ಸ್ವಂತ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದರು.