

ತುಮಕೂರು: ಭೀಮಸಂದ್ರ ಕೆರೆ ಬಳಿಯ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ)ದಿಂದ ಶುದ್ಧೀಕರಿಸಿದ 30 ಎಂಎಲ್‌ಡಿ ತ್ಯಾಜ್ಯ ನೀರನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶಗಳಿಗೆ ಪೂರೈಸುವ 107 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಸ್ಮಾರ್ಟ್‌ಸಿಟಿ ತುಮಕೂರು ಅರ್ಧದಷ್ಟು ಭಾಗ ಒಳಚರಂಡಿ ವ್ಯವಸ್ಥೆ ಹೊಂದಿದ್ದು ಯುಜಿಡಿಯಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ ಭೀಮಸಂದ್ರ ಕೆರೆ ಬಳಿ ಇದೆ. 24.57 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರನ್ನು ಪ್ರತಿನಿತ್ಯ ಈ ಘಟಕದಲ್ಲಿ ಶುದ್ಧೀಕರಿಸಬಹುದಾಗಿದ್ದು, ಈ ನೀರನ್ನು ಟೆರಿಷರಿ ಟ್ರೀಟ್ಮೆಂಟ್ (ಮೂರನೇ ಹಂತದ ಶುದ್ಧೀಕರಣ) ಬಳಿಕ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಯೋಜನೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿದ್ಧಪಡಿಸಿದೆ. ಯೋಜನೆಯ ಗುತ್ತಿಗೆಯನ್ನು ಬಳ್ಳಾರಿಯ ಶ್ರೀ ಶ್ರೀನಿವಾಸ ಕಂಸ್ಟ್ರಕ್ಟ್‌ನ್ಸ್ ಇಂಡಿಯಾ ಪ್ರೈ ಲಿ., ಈಗಲ್ ಇನ್‌ಫ್ರಾ ಇಂಡಿಯಾ ಲಿಮಿಟೆಡ್ (ಜೆವಿ) ಟೆಂಡರ್ ಆಧಾರದ ಮೇಲೆ 107.40 ಕೋಟಿ ರೂ. ಮೊತ್ತಕ್ಕೆ ಪಡೆದುಕೊಂಡಿವೆ.
ಮಾರ್ಚ್‌ನಲ್ಲೇ ಕಾರ್ಯಾದೇಶ: ಈಗಲ್ ಇನ್‌ಫ್ರಾ ಇಂಡಿಯಾ ಲಿಮಿಟೆಡ್‌ಗೆ ಮಾ.23 ರಂದೇ ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿಯನ್ನು ಕೆಐಎಡಿಬಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುವುದು. 2021ರ ಸೆ.22ಕ್ಕೆ ಪೂರ್ಣಗೊಳಿಸಲು ಕಾರ್ಯಾದೇಶದಲ್ಲಿ ಸೂಚಿಸಲಾಗಿತ್ತು. ಕರೊನಾ ಕಾರಣದಿಂದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಲಾಕ್‌ಡೌನ್ ಸಡಿಲಿಕೆಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶ ಹಂತ-1, 2 ಮತ್ತು 3ರಲ್ಲಿ ಅಭಿವೃದ್ಧಿಪಡಿಸಿರುವ 3800 ಎಕರೆ ವಿಸ್ತೀರ್ಣದಲ್ಲಿನ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ
15 ಎಂ.ಎಲ್.ಡಿ. ನೀರನ್ನು ಈ ಯೋಜನೆಯಿಂದ ಒದಗಿಸಲು ಹಾಗೂ 4, 5 ಹಾಗೂ 6ನೇ ಹಂತಕ್ಕೆ 15 ಎಂ.ಎಲ್.ಡಿ ನೀರನ್ನು ಒದಗಿಸಲು ಉದ್ದೇಶಿಸಲಾಗಿದೆ.
ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆಗೆ ಒತ್ತುಕೊಡುವ ಈ ಯೋಜನೆಯಿಂದ ಕೈಗಾರಿಕಾ ಪ್ರದೇಶದ 1, 2 ಹಾಗೂ 3ನೇ ಹಂತಗಳಿಗೆ ಶುದ್ಧೀಕರಿಸಿದ ಕೊಳಚೆ ನೀರು ಪೂರೈಸಬಹುದು. ಸದ್ಯ ಕುಪ್ಪೂರು ಕೆರೆಯಿಂದ ಪೂರೈಸುತ್ತಿರುವ ಹೇಮೆ ನೀರನ್ನು ಕುಡಿಯಲು ಬಳಸಿಕೊಳ್ಳಬಹುದಾಗಿದೆ.
10 ವರ್ಷ ನಿರ್ವಹಣೆ ಹೊಣೆ: ಭೀಮಸಂದ್ರ ಕೆರೆ ಬಳಿಯ ಎಸ್‌ಟಿಪಿ ಉಸ್ತುವಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಹಿಸಿಕೊಂಡಿದೆ. ಆಧುನಿಕ ಹಾಗೂ ಸುಧಾರಿತ ತಂತ್ರಜ್ಞಾನದ ಮೂಲಕ 3 ಹಂತದಲ್ಲಿ ನೀರು ಶುದ್ಧೀಕರಿಸಿ ನೀಡಲಾಗುವುದು. ಭೀಮಸಂದ್ರದಿಂದ ವಸಂತನರಸಾಪುರಕ್ಕೆ ಪೈಪ್‌ಲೈನ್ ಮೂಲಕ ಪೂರೈಸಲಾಗುವುದು.10 ವರ್ಷ ನಿರ್ವಹಣೆ ಜವಾಬ್ದಾರಿ ಕೂಡ ಟೆಂಡರ್ ಪಡೆದ ಬಳ್ಳಾರಿಯ ಶ್ರೀ ಶ್ರೀನಿವಾಸ ಕಂಸ್ಟ್ರಕ್ಟ್‌ನ್ಸ್ ಇಂಡಿಯಾ ಪ್ರೈ ಲಿ., ಈಗಲ್ ಇನ್‌ಫ್ರಾ ಇಂಡಿಯಾ ಲಿಮಿಟೆಡ್ (ಜೆವಿ) ಗಳದೇ ಆಗಿರಲಿದೆ ಎನ್ನುತ್ತಾರೆ ಅಭಿವೃದ್ಧಿ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್.
ಹೇಮೆ, ಎತ್ತಿನಹೊಳೆ ಯೋಜನೆ ನೀರನ್ನು ಕುಡಿಯಲು ಬಳಸಬೇಕಾಗಿದ್ದು, ಕೈಗಾರಿಕಾ ಪ್ರದೇಶಕ್ಕೆ ಭೀಮಸಂದ್ರ ಕೆರೆ ಬಳಿಯ ಎಸ್‌ಟಿಪಿ ಘಟಕದಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಸರಬರಾಜು ಮಾಡುವ ಯೋಜನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಸಿರು ನಿಶಾನೆ ತೋರಿಸಿದ್ದಾರೆ. ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜಿ.ಎಸ್.ಬಸವರಾಜು ಸಂಸದ ನಗರದ ಜನಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು ಕೈಗಾರಿಕಾ ಪ್ರದೇಶಕ್ಕೆ ಹೇಮೆ ನೀರು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೈಗಾರಿಕಾ ಪ್ರದೇಶಕ್ಕೆ ಪೂರೈಸುವ ಯೋಜನೆಗೆ ಸರ್ಕಾರ ಒಪ್ಪಿದ್ದು ತ್ಯಾಜ್ಯ ನೀರು ಸಂಸ್ಕರಿಸುವ ದೊಡ್ಡ ಸವಾಲು ಕೂಡ ಬಗೆಹರಿದಂತಾಗಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ