

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಿಂದ ನಿರ್ಮಿಸಲಾದ 5 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪ್ರತಿ ಘಟಕಕ್ಕೆ 8-10 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗಿರುವ ಈ ಘಟಕಗಳು ಹಾಳಾಗಿ ವರ್ಷಗಳೇ ಕಳೆದಿವೆ. ಕೆಲ ಘಟಕಗಳಂತೂ ಉದ್ಘಾಟನೆಯೇ ಆಗಿಲ್ಲ. ಕೆಲವು ಉದ್ಘಾಟನೆಗೊಂಡ ನಂತರ ಹಾಕಿದ ಬೀಗಗಳು ತೆಗೆದೇ ಇಲ್ಲ. ಘಟಕದಲ್ಲಿನ ಯಂತ್ರಗಳು ತುಕ್ಕು ಹಿಡಿಯುತ್ತಿದ್ದು ಸುತ್ತಲೂ ಗಿಡಗಂಟೆಗಳು ಬೆಳೆದು ಕ್ಯಾಬೀನ್ ಧೂಳು ತಿನ್ನುತ್ತಿವೆ. ಎಲ್ಲ ಘಟಕಗಳು ನಿರ್ವಹಣೆ ಇಲ್ಲದೇ ನಿರುಪಯುಕ್ತವಾಗಿವೆ.
ಪಟ್ಟಣದ ಅರ್ಧ ಭಾಗಕ್ಕೆ ಮಾತ್ರ ನದಿ ನೀರು ಬರುತ್ತಿದ್ದು ಇನ್ನರ್ಧ ಭಾಗಕ್ಕೆ ಫ್ಲೋರೈಡ್‌ಯುಕ್ತ ಬೋರ್‌ವೆಲ್ ನೀರು ಸರಬರಾಜು ಮಾಡಲಾಗುತ್ತಿದೆ. ಯೋಜನೆಯ ಉದ್ದೇಶ ಈಡೇರದೇ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.
ಪಟ್ಟಣದ ಬಸ್ತಿಬಣ, ಕೆಂಚಲಾಪುರ, ಅಂಬೇಡ್ಕರ್ ನಗರ, ಡೋಹರ್‌ಗಲ್ಲಿ ಸೇರಿದಂತೆ ಒಟ್ಟು 5 ಘಟಕಗಳಿದ್ದು ಸದ್ಯಕ್ಕೆ ಎಲ್ಲವೂ ಬಂದ್ ಆಗಿವೆ. ಇಂದಿರಾ ನಗರದಲ್ಲಿ ಐದಾರು ವರ್ಷಗಳ ಹಿಂದೆ ನಿರ್ಮಿಸಲಾದ ಘಟಕ ಪ್ರಾರಂಭವೇ ಆಗಿಲ್ಲ. ಉಳಿದ ಕಡೆ ದುರಸ್ತಿಯಿಂದಾಗಿ ಘಟಕಗಳಿಗೆ ಹಾಕಲಾದ ಬೀಗ ತೆರೆದೇ ಇಲ್ಲ. ಆದರೆ, ಪಟ್ಟಣದಲ್ಲಿ ಖಾಸಗಿಯವರು ನಿರ್ಮಿಸಿದ ಘಟಕಗಳ ಮುಂದೆ ಸದಾ ಕ್ಯೂ ಇರುವುದು ಶುದ್ಧ ನೀರಿನ ಘಟಕಗಳ ಅವಶ್ಯಕತೆಯನ್ನು ಬಿಂಬಿಸುತ್ತದೆ.
ಪಟ್ಟದಲ್ಲಿ ಪುರಸಭೆಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕಗಳು ನಿರುಪಯುಕ್ತವಾಗಿದ್ದು ವಾರ್ಡ್ ಸದಸ್ಯರಾಗಲಿ ಮತ್ತು ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ಪಟ್ಟಣಕ್ಕೆ 15 ದಿನಕ್ಕೊಮ್ಮೆ ನದಿ ನೀರು ಬರುತ್ತದೆ. ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಿಲ್ಲ. ಖಾಸಗಿ ಶುದ್ಧ ನೀರಿನ ಘಟಕಗಳು ನೀರಿನ ದರ ಹೆಚ್ಚಿಸುತ್ತಿವೆ. ಪುರಸಭೆಯವರು ಕೆಟ್ಟು ನಿಂತಿರುವ ಘಟಕಗಳನ್ನು ರಿಪೇರಿ ಮಾಡಿಸಿ ನಿರುದ್ಯೋಗಿ ಯುವಕರು, ಬಡವರು, ಅಂಗವಿಕಲರಿಗೆ ನಿರ್ವಹಣೆಯ ಜವಾಬ್ದಾರಿ ನೀಡಿದರೆ ಅಂಥವರ ಬದುಕಿಗೂ ಆಸರೆ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ನಿರ್ಮಿಸಿದ ಘಟಕಗಳ ಉದ್ದೇಶವೂ ಸಾರ್ಥಕವಾಗುತ್ತದೆ ಎನ್ನುತ್ತಾರೆ ನಾಗರಿಕರಾದ ಚಂದ್ರು ಮಾಗಡಿ, ರಾಜು ಲಿಂಬಿಕಾಯಿ.
ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ ಟೆಂಡರ್ ಕರೆಯಲಾಗುತ್ತದೆ. ದುರಸ್ತಿ ಬಳಿಕ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.ಶಂಕರ ಹುಲ್ಲಮ್ಮನವರ ಮುಖ್ಯಾಧಿಕಾರಿ