ಭತ್ತ ಖರೀದಿ ದರ ಹೆಚ್ಚಳಕ್ಕೆ ಅಸಮ್ಮತಿ

raitha
ಕೋಟ ಸಹಕಾರಿ ಸಂಘದ ಸಭಾಂಗಣದಲ್ಲಿ ಕೋಟ ರೈತಧ್ವನಿ ಸಂಘಟನೆ ಆಶ್ರಯದಲ್ಲಿ ರೈತರು ಹಾಗೂ ಮಿಲ್ ಮಾಲಕರ ನಡುವೆ ಸಭೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕೋಟ

ಭತ್ತ ಖರೀದಿ ದರ ಹೆಚ್ಚಳ ಕುರಿತು ಮನವಿಯ ಹಿನ್ನೆಲೆಯಲ್ಲಿ ಕೋಟ ಸಹಕಾರಿ ಸಂಘದ ಸಭಾಂಗಣದಲ್ಲಿ ಕೋಟ ರೈತಧ್ವನಿ ಸಂಘಟನೆ ಆಶ್ರಯದಲ್ಲಿ ಭಾನುವಾರ ರೈತರು ಹಾಗೂ ಮಿಲ್ ಮಾಲಕರ ಸೌಹಾರ್ದ ಸಭೆ ನಡೆಯಿತು.

ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ, ರೈತರು ಬೆಳೆದ ಭತ್ತಕ್ಕೆ ಹತ್ತಾರು ವರ್ಷದಿಂದ ಬೆಲೆ ಏರಿಕೆಯಾಗಿಲ್ಲ. ಅಕ್ಕಿ ದರದಲ್ಲಿ ನಾಲ್ಕೈದು ಪಟ್ಟು ಏರಿಕೆಯಾದರೂ, ಭತ್ತಕ್ಕೆ ಹೆಚ್ಚಳವಾಗಿಲ್ಲ. ಕಟಾವು ಅವಧಿಯಲ್ಲಿ ಮಿಲ್ ಮಾಲೀಕರು ಬೆಲೆ ಇಳಿಕೆ ತಂತ್ರ ಅನುಸರಿಸುತ್ತಾರೆ. ಇದು ಅಸಮರ್ಪಕ. ಈ ಬಾರಿಯಾದರೂ ಉತ್ತಮ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಮಿಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ತೆಕ್ಕಟ್ಟೆ ರಮೇಶ್ ನಾಯಕ್, ರೈತರೆಲ್ಲರೂ ಒಟ್ಟಾಗಿ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಿರುವುದು ಇದೇ ಮೊದಲು. ಇದು ಕೃಷಿ ವಲಯದ ಉತ್ತಮ ಬೆಳವಣಿಗೆ. ಆದರೆ ಭತ್ತಕ್ಕೆ ದರ ನಿಗದಿಪಡಿಸುವುದು ಮಿಲ್ ಮಾಲೀಕರು ಎನ್ನುವುದು ತಪ್ಪು ಅಭಿಪ್ರಾಯ. ಜಾಗತಿಕ ಬದಲಾವಣೆಗಳು, ಮಾರುಕಟ್ಟೆ ಮೌಲ್ಯ ಅವಲಂಬಿಸಿ ದರ ನಿಗದಿಯಾಗುತ್ತದೆ. ಆದ್ದರಿಂದ ಈಗಿರುವ ದರವನ್ನು ನಾವು ಏರಿಸುವುದು ಅಸಾಧ್ಯ ಎಂದರು.

ಸಭೆಯಲ್ಲಿ ಭತ್ತದ ಬೆಲೆ ಹೆಚ್ಚಳಗೊಳಿಸುವ ಕುರಿತು ತೀವ್ರ ಚರ್ಚೆ ನಡೆದಿದ್ದು, ಆದರೆ ಮಿಲ್ ಮಾಲಕರು ಬೆಲೆ ಏರಿಕೆಗೆ ಒಪ್ಪದೇ ಇದ್ದಿದ್ದರಿಂದ ಸಭೆ ಕೊನೆಗೊಂಡಿತು. ಮಿಲ್ ಮಾಲೀಕರ ಸಂಘದ ಸಂತೋಷ್ ನಾಯಕ್, ಸಂಘಟನೆ ಪ್ರಮುಖರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ಟಿ.ಮಂಜುನಾಥ, ತಿಮ್ಮ ಕಾಂಚನ್ ಉಪಸ್ಥಿತರಿದ್ದರು.

ರೈತರ ಯಾವುದೇ ಬೇಡಿಕೆಗಳಿಗೆ ಮಿಲ್ ಮಾಲೀಕರು ಸಹಮತ ವ್ಯಕ್ತಪಡಿಸದಿದ್ದು, ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿ, ಎಸ್.ಪಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರೈತರನ್ನು ಸಂಘಟಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. - ಟಿ.ಮಂಜುನಾಥ, ರೈತಧ್ವನಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net