

ವಿಜಯವಾಣಿ ಸುದ್ದಿಜಾಲ ಧಾರವಾಡ ಜಿಲ್ಲೆಯಲ್ಲಿ ಸದ್ಯ ಹಿಂಗಾರು ಮಳೆ ಹದಭರಿತವಾಗುತ್ತಿದೆ. ಮುಂಗಾರು ಕೂಡ ಕೈ ಹಿಡಿದಿರುವುದು ದಸರಾ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ವಿಜಯ ದಶಮಿ ಮನೆ ಮಂದಿಗೆಲ್ಲ ಖುಷಿ ತರಲೆಂಬ ಉದ್ದೇಶದೊಂದಿಗೆ ಜನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವಿವಿಧ ಮಳಿಗೆಗಳಲ್ಲಿ ಖರೀದಿಯ ಸಂಭ್ರಮವೂ ಕಾಣಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಧಾರವಾಡ ಮಾರುಕಟ್ಟೆಯೂ ಬೆಳೆಯುತ್ತಿದೆ. ರೆಡಿಮೇಡ್ ಬಟ್ಟೆಗಳ ಮಾಲ್‌ಗಳು, ಹೋಲ್‌ಸೇಲ್ ದರದಲ್ಲಿ ಬಟ್ಟೆ, ಜವಳಿ ಅಂಗಡಿಗಳು, ಜವಳಿ, ಬಂಗಾರ, ಇಲೆಕ್ಟ್ರಾನಿಕ್ಸ್ ಮಳಿಗೆಗಳು, ಬ್ರ‍್ಯಾಂಡೆಡ್ ಉತ್ಪನ್ನಗಳ ಮಳಿಗೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಆರಂಭಗೊAಡಿವೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ಎಲ್ಲ ಮಳಿಗೆಗಳಲ್ಲಿ ಖರೀದಿಯ ಭರಾಟೆ ಜೋರಾಗಿದೆ. ದಸರಾ ಹಬ್ಬಕ್ಕೆ ಚಿನ್ನ- ಬೆಳ್ಳಿಯನ್ನು ಖರೀದಿಸುವುದು ಶುಭಕರ. ಮಧ್ಯಮ ವರ್ಗದ ಜನರೂ ದಸರಾ ಸಂದರ್ಭದಲ್ಲಿ ಒಂದಿಷ್ಟು ಚಿನ್ನ ಖರೀದಿಸುವುದು ವಾಡಿಕೆ. ಸಿರಿವಂತರೂ ದಸರಾಕ್ಕೆ ಚಿನ್ನ- ಬೆಳ್ಳಿಯನ್ನು ಖರೀದಿಸುತ್ತಾರೆ. ಚಿನ್ನದ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳಲ್ಲಿ ಆಭರಣ ಪ್ರಿಯರು ತುಂಬಿದ್ದು, ಚಿನ್ನಾಭರಣಗಳಿಗೆ ಬಲು ಬೇಡಿಕೆ ಬಂದಿದೆ. ಚಿನ್ನದ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದರೂ ಕೊಳ್ಳುವವರ ಸಂಖ್ಯೆಗೆ ಕಡಿಮೆ ಇಲ್ಲ. ಇನ್ನು ಹಬ್ಬ ಬಂತೆAದರೆ ಬಟ್ಟೆ ಖರೀದಿ ಸಾಮಾನ್ಯ. ಹಬ್ಬದ ಖುಷಿ ಇಮ್ಮಡಿಗೊಳ್ಳಲೆಂಬ ಉದ್ದೇಶದಿಂದ ಕುಟುಂಬದವರಿಗೆಲ್ಲ ಬಟ್ಟೆ ಖರೀದಿಸಲಾತ್ತಿದೆ. ಶಾಲೆ- ಕಾಲೇಜುಗಳಿಗೆ ರಜೆ ಇರುವುದರಿಂದ ಮಹಿಳೆಯರು ಮಕ್ಕಳೊಂದಿಗೆ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಇದರಿಂದ ಸುಭಾಸ ರಸ್ತೆ, ವಿಜಯಾ ರಸ್ತೆ, ಜ್ಯುಬಿಲಿ ವೃತ್ತ, ಟಿಕಾರೆ ರಸ್ತೆ, ಲೈನ್ ಬಜಾರ್‌ನ ಬಟ್ಟೆ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ನಿವೇಶನ, ಫ್ಲಾಟ್, ಮನೆ ಖರೀದಿಯೂ ದಸರಾ ಸಂದರ್ಭದಲ್ಲಿ ಸಾಮಾನ್ಯ. ನಗರಕ್ಕೆ ಹೊಂದಿಕೊAಡ ಹಾಗೂ ಹೊರವಲಯದಲ್ಲಿ ಅನೇಕ ಲೇಔಟ್‌ಗಳು ನಿರ್ಮಾಣಗೊಂಡಿವೆ. ಡೆವಲರ್‌ಗಳು ರಿಯಾಯಿತಿ ನೀಡುತ್ತಿದ್ದು, ಜನ ನಿವೇಶಗಳ ಖರೀದಿ ಮತ್ತು ಹೂಡಿಕೆಯಲ್ಲಿ ನಿರತರಾಗಿದ್ದಾರೆ. ಆರ್ಥಿಕ ವಹಿವಾಟು ಬೂಮ್ ಪಡೆದಿರುವುದು ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.