

ಧಾರವಾಡ: ರಾಜ್ಯ ಸರ್ಕಾರದ ಆದೇಶದಂತೆ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ರೈತರಿಂದ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಲ್‌ಗೆ 2,090 ರೂ.ನೀಡಿ ಖರೀದಿಸಲಿದೆ ಎಂದು ಪಶು ಆಹಾರ ಘಟಕದ ಪ್ರಾಂತೀಯ ನಿರ್ದೇಶಕ ಡಿ. ಅಶೋಕ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರತಿ ಕ್ವಿಂಟಲ್‌ಗೆ 2 ಗೋಣಿ ಚೀಲದ ಮೊತ್ತ (59 ಕೆಜಿ ಸಾಮರ್ಥ್ಯ) ಮತ್ತು ಸಾಗಾಣಿಕ ಪ್ರೋತ್ಸಾಹವಾಗಿ 160 ರೂ. ಸೇರಿ ಪ್ರತಿ ಕ್ವಿಂಟಲ್‌ಗೆ ಒಟ್ಟು 2,250 ರೂ. ನೀಡಿ ಖರೀದಿಸಲಾಗುವುದು. ಮೆಕ್ಕೆಜೋಳವನ್ನು ನೇರವಾಗಿ ಜಿಲ್ಲಾ ಹಾಲು ಒಕ್ಕೂಟಗಳ ಮೇಲ್ವಿಚಾರಣೆ ಸಹಕಾರದೊಂದಿಗೆ ಖರೀದಿಸುವ ಪ್ರಕ್ರಿಯೆ ನ. 13ರಿಂದ ಆರಂಭವಾಗಲಿದೆ.
ಸರ್ಕಾರದ ಕೃಷಿ ಇಲಾಖೆ ಸಿದ್ಧಪಡಿಸಿದ ಫ್ರುಟ್ಸ್ ಐಡಿ ಹೊಂದಿರುವ ಅರ್ಹ ರೈತರು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಲಭ್ಯವಿರುವ ಕ್ಷೀರಸಿರಿ ತಂತ್ರಾಂಶದ ಮೂಲಕ ನೋಂದಾಯಿಸಬಹುದು. ಪ್ರತಿ ರೈತನಿಂದ 1000 ಕ್ವಿಂಟಲ್ ಮೆಕ್ಕಜೋಳ ಖರೀದಿಗೆ ಸೀಮಿತಗೊಳಿಸಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕ ಡಾ. ಆರ್.ಡಿ. ಪಾಟೀಲ, ಡಾ. ಬಾಳಪ್ಪ ಮುನವಳ್ಳಿ, ಸತೀಶ ಖವಟಕೊಪ್ಪ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.