

ಮಂಡ್ಯ: ಪ್ರಸಕ್ತ ಸಾಲಿನ ಕನಿಷ್ಟ ಬೆಂಬಲ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ಸರ್ಕಾರ 12 ಸಾವಿರ ರೂ ಘೋಷಿಸಿದೆ. ಅದರಂತೆ ಖರೀದಿಗೆ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಎಂ.ಕೃಷ್ಣಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ನೇರವಾಗಿ ಸಹಕಾರ ಮಾರಾಟ ಮಹಾಮಂಡಳಿ ಖರೀದಿ ಮಾಡಲಿದೆ. ಕೆ.ಆರ್.ಪೇಟೆಯಲ್ಲಿ 1, ಪಾಂಡವಪುರದಲ್ಲಿ 1 ಹಾಗೂ ನಾಗಮಂಗಲದಲ್ಲಿ 2 ನೋಂದಣಿ ಕೇಂದ್ರ ತೆರೆಯಲಾಗುವುದು. ಬಳಿಕ ಮಾರಾಟದಾರರಿಂದ ಖರೀದಿಸಲು ನಾಗಮಂಗಲ ಹಾಗೂ ಕೆ.ಆರ್.ಪೇಟೆಯಲ್ಲಿ 2 ಕೇಂದ್ರ ಪ್ರಾರಂಭಿಸಲಾಗುವುದು. ನೋಂದಣಿ ಹಾಗೂ ಖರೀದಿಗೆ ಬೇಕಿರುವ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಜತೆಗೆ ಕೇಂದ್ರದಲ್ಲಿ ಅಗತ್ಯ ಮೂಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ವಿದ್ಯುನ್ಮಾನ ತೂಕದಯಂತ್ರ, ಮೇಜು, ಕುರ್ಚಿಗಳನ್ನು ಒದಗಿಸಿ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಅಶೋಕ್, ಎಪಿಎಂಸಿ ಕಾರ್ಯದರ್ಶಿ ರೇವತಿ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.