

ಬೇಲೂರು: ಪುರಸಭೆಯ ವಾಣಿಜ್ಯ ಮಳಿಗೆಗಳ ವಿಚಾರ ಬೆಳಗಾವಿಯಲ್ಲೂ ಸದ್ದು ಮಾಡಿದ್ದರಿಂದ ಯಾವುದೇ ಅವ್ಯವಹಾರಕ್ಕೆ ಅವಕಾಶವಾಗದಂತೆ ಪಾರದರ್ಶಕವಾಗಿ ಟೆಂಡರ್ ಕರೆಯುವಂತೆ ಮುಖ್ಯಾಧಿಕಾರಿಗೆ ತಿಳಿಸಿದ್ದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ನಾಲ್ಕು ಬಾರಿ ನನ್ನ ಹತ್ತಿರ ಬಂದು ಚರ್ಚಿಸಿದ್ದರು. ಆದರೆ ಇಲ್ಲಿ ದುಡಿದು ತಿನ್ನುವವರು ಕೇಳುತಿದ್ದೀರಿ, ನಿಮಗೆ ಕೊಡಿಸಲು ನಾನು ಬದ್ಧ ಎಂದಿದ್ದೆ. ಆದರೆ ಟೆಂಡರ್‌ನಲ್ಲಿ ಮಳಿಗೆ ಕೊಡುವುದಾದರೆ ಸಚಿವರು, ಶಾಸಕರು, ಮಾಜಿ ಸಚಿವರು, ಸದಸ್ಯರು ಸೇರಿದಂತೆ ಇತರರಿಗೆ ಇಂತಿಷ್ಟು ಹಣ ಕೊಡಬೇಕೆಂಬ ವಿಷಯ ಬೆಳಗಾವಿಯಲ್ಲೂ ಸದ್ದು ಮಾಡಿದ್ದರಿಂದ ಮತ್ತು ಯಾರಿಗೂ ಹಣ ಕೊಡದಂತೆ ಹಾಗೂ ಕಿತ್ತು ತಿನ್ನುವವರಿಗೆ ಅವಕಾಶವಾಗಬಾರದೆಂದು ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿರಲೆಂದು ಮುಖ್ಯಾಧಿಕಾರಿಗೆ ತಿಳಿಸಿದ್ದೆ. ಆದರೆ ಈಗಿನ ಮಳಿಗೆದಾರರಲ್ಲಿ 100ಕ್ಕೂ ಹೆಚ್ಚು ಜನರು ಮಳಿಗೆಗಳ ಅವಲಂಬಿತರಾಗಿದ್ದಾರೆ. ಪುರಸಭೆ ಸದಸ್ಯರು ಸಹಕಾರ ನೀಡಿದರೆ ಈಗಿರುವವರಿಗೆ ಆದ್ಯತೆ ಮೇಲೆ ಕಾನೂನು ಪ್ರಕಾರ ಕೊಡಿಸಲು ಅವಕಾಶ ಮಾಡಿಕೊಡುವುದಕ್ಕೆ ನನ್ನ ಸಹಮತವಿದೆ ಎಂದರು.
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ವಾಣಿಜ್ಯ ಮಳಿಗೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಸದಸ್ಯರು ಟೆಂಡರ್ ರದ್ದುಪಡಿಸುವಂತೆ ಒಕ್ಕೊರಲಿನ ತೀರ್ಮಾನ ತಿಳಿಸಿದ್ದಾರೆ. ಆದರೆ ಟೆಂಡರ್‌ಗೂ ಮುನ್ನ ಅನೇಕ ಗಾಳಿ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಪಾರದರ್ಶಕತೆ ಮೆರೆದಿದ್ದೇವೆ. ಪುರಸಭೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಈಗ ನಡೆದಿರುವ ಟೆಂಡರ್ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದ್ದರೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪಾಧ್ಯಕ್ಷೆ ಸೌಮ್ಯಾ ಮಾತನಾಡಿ, ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆದರೆ ಇಲ್ಲಿ ಬಡ ವ್ಯಾಪಾರಿಗಳಿಗೆ ಅನ್ಯಾಯವಾಗುವುದಾದರೆ ಇ- ಪ್ರಕ್ಯೂರ್‌ಮೆಂಟ್ ಟೆಂಡರ್ ರದ್ದು ಮಾಡಿ ಹಳಬರಿಗೆ ಆದ್ಯತೆ ಮೇಲೆ ಕೊಡುವುದಕ್ಕೆ ಮುಂದಾಗಬಹುದು ಎಂದರು.
ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಬಾಡಿಗೆ ಹಣ ಕಟ್ಟುವಂತೆ ಈ ಮೊದಲೇ ಮಳಿಗೆದಾರರಿಗೆ ನೋಟಿಸ್ ನೀಡಿ ತಿಳಿಸಲಾಗಿತ್ತು. ಈಗಲೂ ಅವರು ಬಾಡಿಗೆ ಕಟ್ಟಲಿಲ್ಲವೆಂದರೆ ಅವರ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುತ್ತೇವೆ ಎಂದರು.