

ಚಿಕ್ಕನಾಯಕನಹಳ್ಳಿ: ಭವಿಷ್ಯನಿಧಿಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ವಿಭಾಗದವರು, ಡ್ರೈವರ್‌ಗಳು, ಕಾರ್ಮಿಕರು ಪುರಸಭಾ ಕಚೇರಿ ಮುಂಭಾಗ ನಡೆಸುತ್ತಿರುವ ಹೋರಾಟಕ್ಕೆ ಬುಧವಾರ ಪುರಸಭೆ ಸದಸ್ಯರು ಬೆಂಬಲ ನೀಡಿ ಪಾಲ್ಗೊಂಡಿದ್ದರು.
2011 ರಿಂದ 2022ವರೆಗಿನ ಪಿಎಫ್ ನೀಡದಿದ್ದರೆ ಅನಿರ್ದಿನಿಷ್ಟಾವಧಿ ಮುಷ್ಕರ ನಡೆಸಲಿದ್ದು, ಸಮಸ್ಯೆಗೆ ಕಾರಣರಾದ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಬೇಕು ಹಾಗೂ ಭವಿಷ್ಯನಿಧಿಯ ಹಣ ಎಲ್ಲಿ ಹೋಯಿತು ಎಂಬುದು ತನಿಖೆಯಾಗಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪುರಸಭಾ ಸದಸ್ಯರು ಎಚ್ಚರಿಸಿದರು.
ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, 2011ರ ಜನವರಿ ಮಾಹೆಯಿಂದ 2022ಜನವರಿಯವರೆಗೆ ಸರಿಯಾಗಿ ಎಲ್ಲರಿಗೂ ಭವಿಷ್ಯನಿಧಿಯ ಹಣ ವೈಯಕ್ತಿಕವಾಗಿ ನೌಕರರ ಖಾತೆಗೆ ಜಮಾ ಆಗಿಲ್ಲ. ಒಟ್ಟು 84 ಜನ ವಿವಿಧ ವರ್ಗದಲ್ಲಿ ಕೆಲಸ ಮಡುತ್ತಿರು ಪೌರಕಾರ್ಮಿಕರಿಗೆ ಸರಿಯಾಗಿ ಪಿಎಫ್ ನೀಡದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು.
ವಿವಿಧ ಕಾರಣಗಳಿಂದ ಮರಣ ಹೊಂದಿರುವ ಐವರು ಪೌರಕಾರ್ಮಿಕರಿಗೆ ಭವಿಷ್ಯನಿಧಿಯ ಹಣ ತಲುಪಿಲ್ಲ. ಈ ಬಗ್ಗೆ ಈ ಹಿಂದೆ 2018 ಜನವರಿ 18ರಲ್ಲಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ಯೋಜನಾಭಿವೃದ್ದಿ ಅಧಿಕಾರಿಗಳಿಗೂ ಮನವಿಸಲ್ಲಿಸಿದ್ದು, ಏನು ಪ್ರಯೋಜನವಾಗಿಲ್ಲ. ಅನ್ಯಾಯ ಮಾಡಿರುವ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು. ಪಿಎಫ್ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪುರಸಭಾ ಸದಸ್ಯೆಯೂ ಆದ ಮಾಜಿ ಉಪಾಧ್ಯಕ್ಷೆ ರೇಣುಕಾಗುರುಮೂರ್ತಿ ಮಾತನಾಡಿ, ಈ ಹಿಂದೆ ಇದ್ದ ಮುಖ್ಯಾಧಿಕಾರಿಗಳು, ಸಂಬಂಧಪಟ್ಟ ಪರಿಸರ ಇಂಜಿನಿಯರ್‌ಗಳ ಬೇಜಾವಾಬ್ದಾರಿಯಿಂದ ಸಮಸ್ಯೆಯಾಗಿದೆ. ಈ ಹಿಂದೆ ಪಿಎಫ್ ಸಂದಾಯ ಮಾಡಿರುವಂತಹ ಹಣ ಎಲ್ಲಿದೆ? ಇವರ ಖಾತೆಗಳಿಗೆ ಏಕೆ ಜಮಾ ಆಗಿಲ್ಲ? ಈ ಬಗ್ಗೆ ಹಣದ ದುರುಪಯೋಗವಾಗಿದ್ದರೆ ಕೂಡಲೇ ತನಿಖೆ ಮಾಡಬೇಕು ಎಂದರು.
ಪೌರಕಾರ್ಮಿಕ ಪಾಂಡುರಂಗಯ್ಯ ಮಾತನಾಡಿ, 2011ರ ಮುಂಚೆ ಸಂಬಂಧಪಟ್ಟ ಕಂಪನಿಯವರು ನಮಗೆ ಪಿಎಪ್ ಸಂದಾಯ ಮಾಡುತ್ತಿದ್ದರು. ಅದರೆ ಅವರು ಸರಿಯಾಗಿ ನಮಗೆ ಸಂದಾಯ ಮಾಡದೇ ಬೇಕಾಬಿಟ್ಟಿ ಕೆಲಸ ಮಾಡುತ್ತಾರೆ ಎಂಬಕಾರಣ ನೀಡಿ 2011ರ ನಂತರ ಜಿಲ್ಲಾಧಿಕಾರಿ ಆದೇಶದಂತೆ ಸಂಬಂಧಪಟ್ಟ ನೌಕರರ ಭವಿಷ್ಯನಿಧಿ ಮೊತ್ತವನ್ನು ಮುಖ್ಯಾಧಿಕರಿಗಳೇ ನೌಕರರ ಖಾತೆಗಳಿಗೆ ಜಮಾಮಾಡಬೇಕು ಎಂದು ತಿಳಿಸಿದ್ದರಿಂದ ಇವರು ಆ ಕೆಲಸ ಮಾಡಬೇಕಿತ್ತು. ಅದರೆ ಇವರ ಬೇಜಾವಾಬ್ದಾರಿಯಿಂದ ಪಿಎಫ್ ಹಣ ಸಿಕ್ಕಿಲ್ಲ ಎಂದರು.
ಕಣ್ಣೀರು ಹಾಕಿದ ಭಾಗ್ಯಮ್ಮ: ಹೇಳಿದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದು, ಸರಿಯಾಗಿ ಸಂಬಳ ನೀಡ್ತಿಲ್ಲ, ಭವಿಷ್ಯನಿಧಿಗೂ ಕಲ್ಲು ಹಾಕ್ತಾರೆ. ಈ ಬಗ್ಗೆ ಏನಾದರು ಪ್ರಶ್ನೆ ಮಾಡಿದರೆ ನಮ್ಮನ್ನು ಕೆಲಸದಿಂದ ತೆಗೆಯುವುದಾಗಿ ಹೆದರಿಸುತ್ತಾರೆ, ಕೂಲಿ ಮಾಡಲು ಎಲ್ಲಿಗೆ ಹೋಗಬೇಕು ನಾವು? ಇವರ ಭಯದಿಂದ ನಾವು ಜೀವನ ಸಾಗಿಸುವುದೇ ಕಷ್ಟವಾಗಿದೆ. ನ್ಯಾಯ ನೀಡಬೇಕೆಂದು ಹೊರಗುತ್ತಿಗೆ ನೌಕರರಾದ ಭಾಗ್ಯಮ್ಮ ಕಣ್ಣೀರಿಟ್ಟರು. ಪುರಸಭಾಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಮಂಜುನಾಥ್, ಉಮಾ, ನಾಗರಾಜು, ಸಿ.ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೇಗೌಡ, ಸುಬ್ರಮಣ್ಯ, ನಿಂಗರಾಜು, ಅರುಣ, ನಾರಾಯಣ್ ಇದ್ದರು.
ಪ್ರತಿನೌಕರರ ದಾಖಲೆಗಳು ಆನ್‌ಲೈನ್ ಮೂಲಕ ಕೆವೈಸಿ ಮಾಡಲಾಗುತ್ತಿದೆ. ತಪ್ಪು ಮಾಡಿರುವ ಅಧಿಕಾರಿಯ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರಬರೆಯಲಾಗಿದ್ದು, ಅದರ ಬಗ್ಗೆ ಸಂಬಂಧಪಟ್ಟ ಇಲಾಖೆಯೊಡನೆ ಮಾತನಾಡಲಾಗುವುದು. ಸದ್ಯದಲ್ಲೆ ಸಮಸ್ಯೆ ಬಗೆಹರಿಸಲಾಗುವುದು. ಶ್ರೀನಿವಾಸ್ ಮುಖ್ಯಾಧಿಕಾರಿ