

ತುಮಕೂರು : ನಗರದ ಡಾ.ಶಿವಕುಮಾರ ಸ್ವಾಮೀಜಿ ರಸ್ತೆ ಮಧ್ಯೆ ನೆಡಲಾಗಿರುವ ಬೇವಿನ ಮರಗಳಿಗೆ ಭಾನುವಾರ ಬೆಳಗ್ಗೆ ಪಾಲಿಕೆ ಕೊಡಲಿ ಹಾಕಿದ್ದು ಹತ್ತಕ್ಕೂ ಹೆಚ್ಚು ಮರಗಳು ನಾಶವಾಗಿವೆ.
ನಗರದ ಸಿದ್ಧಗಂಗಾ ಆಸ್ಪತ್ರೆ ಮುಂಭಾಗದ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಜಾಹೀರಾತು ಫಲಕಗಳಿಗೆ ಅಡ್ಡವಾಗಿವೆ ಎಂದು ಕಡಿಯಲಾಗಿದ್ದು, ಪಾಲಿಕೆ ಅಧಿಕಾರಿಗಳೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಅಧಿಕಾರಿಗಳೇ ಶಾಮೀಲು?: ನಗರದಲ್ಲಿ ಜಾಹೀರಾತು ಫಲಕ ಅಳವಡಿಕೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದ್ದು, ಜಾಹೀರಾತು ಗುತ್ತಿಗೆದಾರರ ಜತೆ ಪಾಲಿಕೆ ಅಧಿಕಾರಿಗಳೇ ಶಾಮೀಲಾಗಿ ಮರಗಳನ್ನು ಕಡಿಯಲು ಕುಮ್ಮಕ್ಕು ನೀಡಿರುವ ಶಂಕೆಯಿದೆ. ಭಾನುವಾರ ಅಧಿಕಾರಿಗಳು ರಜೆಯಲ್ಲಿರುವ ಕಾರಣಕ್ಕೆ ಈ ದಿನವನ್ನೇ ಆಯ್ಕೆ ಮಾಡಿಕೊಂಡು ಮರಗಳನ್ನು ನೆಲಕ್ಕುರುಳಿಸಲಾಗಿದೆ.
ಮರಕಡಿದ ವಿಷಯ ತಿಳಿದ ಸ್ಥಳೀಯರು ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪಾಲಿಕೆ ಆಯುಕ್ತೆ ರೇಣುಕಾ ಅವರನ್ನೂ ಜನ ತರಾಟೆಗೆ ತೆಗೆದುಕೊಂಡರು. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಮರಕಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯುಕ್ತೆ ಭರವಸೆ ನೀಡಿದರು.
ಬೇವಿನ ಮರ ಕಡಿದವರನ್ನು ಪತ್ತೆಹಚ್ಚಿ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ನಾಮಫಲಕದ ಗುತ್ತಿಗೆದಾರ ಕೃತ್ಯ ಎಸಗಿರುವ ಶಂಕೆಯಿದ್ದು, ದೃಢವಾದರೆ ಆತನನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಜಿ.ಬಿ.ಜ್ಯೋತಿಗಣೇಶ್ ಶಾಸಕ ಪಾಲಿಕೆ ಗಮನಕ್ಕೆ ಬರದೆ ಮರಗಳನ್ನು ಕಡಿಯಲಾಗಿದ್ದು, ಸುದ್ದಿ ತಿಳಿದ ಕೂಡಲೇ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಅರಣ್ಯ ಇಲಾಖೆ ಕೂಡ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಿದೆ. ರೇಣುಕಾ ಆಯುಕ್ತೆ, ತುಮಕೂರು ಮಹಾನಗರ ಪಾಲಿಕೆ