

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ದೇಸಾಯಿಗಲ್ಲಿ ವಿಠ್ಠಲ ಮಂದಿರದ ಪುರಂದರ ಮಂಟಪದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಇತ್ತೀಚೆಗೆ ಸಂಭ್ರಮದಿಂದ ಆಚರಿಸಲಾಯಿತು.
ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರಂದರ ಸಾಹಿತ್ಯ ಹಾಗೂ ದಾಸ ಸಾಹಿತ್ಯದಲ್ಲಿ ರಚಿಸಿರುವ ಹಾಡುಗಳ ವಿಮರ್ಶಾತ್ಮಕ ತಿಳಿವಳಿಕೆ ಮೂಡಿಸಿದರು.
ಪಂ. ಸುರೇಶಾಚಾರ್ಯ ರಾಯಚೂರ ಅವರು ಪುರಂದರದಾಸರ ಹಾಡುಗಳಲ್ಲಿ ಅಡಕವಾಗಿರುವ ಸಂಗತಿಗಳನ್ನು ವಿವರಿಸಿದರು. ಆರಾಧನೆ ನಿಮಿತ್ತ ಭಜನಾ ಮಂಡಳಿಗಳಿಗೆ ಏರ್ಪಡಿಸಿದ್ದ ಹರಿದಾಸರು ರಚಿಸಿದ ವಿನಾಯಕನ ಹಾಡುಗಳ ಸ್ಪರ್ಧೆ ವಿಜೇತರಿಗೆ ಡಾ. ಶ್ರೀಧರ ಕುಲಕರ್ಣಿ ಹಾಗೂ ದತ್ತ ನೀರಲಗಿ ಬಹುಮಾನ ವಿತರಿಸಿದರು.
20 ಭಜನಾ ಮಂಡಳಿಗಳು ಭಾಗವಹಿಸಿದ್ದವು. ಈ ಪೈಕಿ ಮಾಳಮಡ್ಡಿಯ ಮಿತ್ರವಿಂದಾ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದು ಗುರು ಪುರಂದರ ವಿಠ್ಠಲ ಪ್ರಶಸ್ತಿ ಪಡೆದುಕೊಂಡಿತು. ಉಳಿದಂತೆ ಶ್ರೀ ಉಡುಪಿ ಕೃಷ್ಣ ಭಜನಾ ಮಂಡಳಿ (ದ್ವಿ), ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿ, ಅಂಜನಾ ಭಜನಾ ಮಂಡಳಿ (ತೃ) ಹಾಗೂ ಅಮೃತ, ಓಂಕಾರ, ಮಂದಸ್ಮಿತ ಭಜನಾ ಮಂಡಳಿಗಳು ಸಮಾಧಾನಕರ ಬಹುಮಾನ ಪಡೆದವು. ಸ್ಪರ್ಧೆ ನಿರ್ಣಾಯಕರಾಗಿ ಡಾ. ಗಾಯತ್ರಿ ದೇಶಪಾಂಡೆ, ಶೃತಿ ಕುಲಕರ್ಣಿ, ರಾಧಾ ಶ್ಯಾಮರಾವ್ ಹಾಗೂ ಅನುರಾಧಾ ಕುಲಕರ್ಣಿ ಆಗಮಿಸಿದ್ದರು.
ಆರ್.ಬಿ. ಗುತ್ತಲ, ವಿವೇಕ ಏರಿ, ಅಂಬೇಕರ ಆಚಾರ್ಯ, ರಮೇಶ ಜಮಾದಾರ, ಎಸ್.ಬಿ. ದ್ವಾರಪಾಲಕ, ಇತರರು ಇದ್ದರು. ಎಸ್.ಬಿ. ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಕುಲಕರ್ಣಿ ನಿರೂಪಿಸಿದರು. ಕೆ.ಆರ್. ದೇಸಾಯಿ ವಂದಿಸಿದರು.