

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ನಡೆದ ಕವಿರತ್ನ ಚನ್ನಕವಿ ಕೃತ ಶ್ರೀನಲವತ್ವಾಡದ ವೀರೇಶ್ವರ ಶರಣರ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಸೆ. 14ರಂದು ಸಂಜೆ 7 ಗಂಟೆಗೆ ಜರುಗಲಿದೆ.
ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರವಚನಕಾರ ವಿರೂಪಾಕ್ಷಶಾಸ್ತ್ರಿಗಳು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧಕ 2023ರ ರಾಜ್ಯ ಪ್ರಶಸ್ತಿ ಪುರಸ್ಕೃತ ಕರಬಸಪ್ಪ ಹಂಚಿನಾಳ, ಜಿಲ್ಲಾ ಶ್ರೇಷ್ಠ ವರ್ತಕ ಪ್ರಶಸ್ತಿ ಪುರಸ್ಕೃತ ವೀರಣ್ಣ ಬೇವಿನಮರದ, ಇಸ್ರೋ ವಿಜ್ಞಾನಿ ಬಸವರಾಜ ಕಲ್ಲಕುಟಗರ, ರಾಷ್ಟ್ರೀಯ ಯೋಗ ಸ್ಪರ್ಧೆಯ ಬೆಳ್ಳಿ ಪದಕ ವಿಜೇತ ನಿರೀಕ್ಷಿತಾ ಡೊಳ್ಳಿನ ಅವರಿಗೆ ಗುರುರಕ್ಷೆ ನಡೆಯಲಿದೆ.
ಕಸಾಪ ತಾಲೂಕು ಕಾರ್ಯದರ್ಶಿ ವೀಣಾ ಪಾಟೀಲ ಅವರು ವೀಣಾತರಂಗ ಗ್ರಂಥ ಬಿಡುಗಡೆಗೊಳಿಸುವರು. ಆರ್.ಎಲ್.ಪೊಲೀಸ ಪಾಟೀಲ ಗ್ರಂಥ ಪರಿಚಯ ಮಾಡುವರು. ಗೌರಮ್ಮ ಹುರಕಡ್ಲಿ, ಜಯಣ್ಣ ಗುಜ್ಜರ ಭಕ್ತಿಸೇವೆ ವಹಿಸಿಕೊಳ್ಳಲಿದ್ದಾರೆ. ಸೋಮನಾಥ ಗವಾಯಿ ಸಂಗೀತ ನಡೆಸಿಕೊಡುವರು. ನಾಗಭೂಷಣ ಹಿರೇಮಠ ತಬಲಾ ಸಾಥ್ ನೀಡುವರು ಎಂದು ಪುರಾಣ ಪ್ರವಚನ ಸಮಿತಿ ಅಧ್ಯಕ್ಷ ಕುಮಾರ ಬನ್ನಿಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.