ಬೊಂಬೆಗಳು ನಮ್ಮ ಸಂಪ್ರದಾಯವನ್ನು ಹೇಳುತ್ತವೆ : ಎಚ್.ವಿ.ರಾಜೀವ್

9
Published on

ಮೈಸೂರು: ಬೊಂಬೆ ಕೇವಲ ಆಟಿಕೆಗಳಲ್ಲ. ಅವು ನಮ್ಮ ಸಂಪ್ರದಾಯವನ್ನು ಹೇಳುತ್ತವೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.

ಎಚ್.ವಿ.ರಾಜೀವ್ ಸ್ನೇಹ ಬಳಗ, ವಿಪ್ರ ಮಹಿಳಾ ಸಂಗಮ, ಕೃಷ್ಣ ಕಾಲಿಂಗ್ ಚಾರಿಟಬಲ್ ಟ್ರಸ್ಟ್ ನಿಂದ ಪ್ರಮತಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ಮನೆ, ಮನೆ ಗೊಂಬೆ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ದಸರಾದಲ್ಲಿ ಬೊಂಬೆ ಕೂರಿಸುವ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಅಜ್ಜಿ ರಂಗಮ್ಮ ದಸರಾ ಸಮಯದಲ್ಲಿ ಬೊಂಬೆ ಕೂರಿಸುವ ಮೂಲಕ ಅವರು ಮಹತ್ವವನ್ನು ಹೇಳುತ್ತಿದ್ದರು. ಹಾಗಾಗಿ ಅವರಲ್ಲಿ ಆಸಕ್ತಿ ಮೂಡಿತು ಎಂದರು. ಈಗಲೂ ಮೈಸೂರು ಭಾಗದಲ್ಲಿ ಬೊಂಬೆ ಕೂರಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಅದನ್ನು ಪ್ರೋತ್ಸಾಹಿಸಲು ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕಲೆಯನ್ನು ಪ್ರೋತ್ಸಾಹಿಸುತ್ತದೆ :

ನೃತ್ಯಾಲಯ ಟ್ರಸ್ಟ್ ನಿರ್ದೇಶಕಿ ತುಳಸಿ ರಾಮಚಂದ್ರ ಮಾತನಾಡಿ, ದಸರಾ ಆರಮನೆಯಲ್ಲಿ ಮಾತ್ರವಲ್ಲ, ಮೈಸೂರಿನ ಮನೆ, ಮನೆಗಳಲ್ಲಿ ನಡೆಯುತ್ತದೆ. ನಮ್ಮ ಹಿರಿಯರು ಗೊಂಬೆಗಳನ್ನು ಕೂರಿಸಿ ಅವುಗಳನ್ನು ಜತನದಿಂದ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಿದ್ದಾರೆ ಎಂದರು. ಬೊಂಬೆಗಳ ಮೂಲಕವೇ ರಾಮಾಯಣ, ಮಹಾಭಾರತ, ರಾಜರ ದರ್ಬಾರ್ ಸೇರಿದಂತೆ ನಾನಾ ಕತೆಗಳನ್ನು ಹೇಳಲಾಗುತ್ತದೆ. ಇದು ನಮ್ಮ ಹೆಣ್ಣು ಮಕ್ಕಳಲ್ಲಿ ಇರುವ ಕಲೆಯನ್ನು ಪ್ರೋತ್ಸಾಹಿಸುತ್ತದೆ. ಇವುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ ತಮ್ಮ ಶ್ರಮ ಸಾರ್ಥಕ. ಬಹುಮಾನ ಬಂದರೆ ಇನ್ನು ಖುಷಿ ಆಗುತ್ತದೆ ಎಂದು ಹೇಳಿದರು.

ಅಕಾಶವಾಣಿ ನಿವೃತ್ತ ನಿರ್ದೇಶಕಿ ಡಾ.ವಿಜಯಾ ಹರನ್ ಮಾತನಾಡಿ, ದಸರಾ ವಿಜಯನಗರ ಕಾಲದಿಂದ ನಡೆದು ಬಂದಿದೆ. ಬೊಂಬೆಗಳ ಪ್ರದರ್ಶನವೂ ಆಗಲೇ ಆರಂಭವಾಯಿತು. ಅಲ್ಲಿಂದ ಮೈಸೂರು ಒಡೆಯರ್ ಕಾಲಕ್ಕೂ ಮುಂದುವರಿಯಿತು ಎಂದು ತಿಳಿಸಿದರು. ವಿಪ್ರ ಮಹಿಳಾ ಸಂಗ್ರಮದ ಅಧ್ಯಕ್ಷೆ ಡಾ.ಕೆ.ವಿ.ಲಕ್ಷ್ಮೀದೇವಿ, ಕೃಷ್ಣ ಕಾಲಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಗಣೇಶ್‌ರಾವ್ ಮಾತನಾಡಿದರು.

ಬಹುಮಾನ ವಿಜೇತರು:

ಗಿರಿದರ್ಶಿನಿ ಬಡಾವಣೆಯ ಗೀತಾ ಶ್ರೀಹರಿ (ಪ್ರಥಮ 25 ಸಾವಿರ ರೂ.), ಜೆ.ಪಿ.ನಗರದ ವಿ.ಆರ್.ಪಾರ್ವತಿ (ದ್ವಿತೀಯ 15 ಸಾವಿರ ರೂ.), ಅಗ್ರಹಾರದ ಹೇಮಾಲತಾ ಕುಮಾರಸ್ವಾಮಿ (ತೃತೀಯ 10 ಸಾವಿರ ರೂ.) ಬಹುಮಾನ ಪಡೆದುಕೊಂಡರು. ಹಿರಿಯರನ್ನು ಪ್ರೋತ್ಸಾಹಿಸಲು 60 ವರ್ಷ ಮೇಲ್ಪಟ್ಟ 7 ಜನರಿಗೆ ತಲಾ 5 ಸಾವಿರ ರೂ., 25 ಜನರಿಗೆ ತಲಾ ಒಂದು ಸಾವಿರ ರೂ. ಸಮಾಧಾನಕರ ಬಹುಮಾನ, 17 ಜನರಿಗೆ 500 ಪ್ರೋತ್ಸಾಹ ಬಹುಮಾನ ನೀಡಲಾಯಿತು. 150ಕ್ಕೂ ಹೆಚ್ಚು ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net