

ಬೆಳಗಾವಿ: ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿರುವ ಪಟ್ಟಣ ಪಂಚಾಯಿತಿಗಳಲ್ಲಿಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಯ ನೂರಾರು ಪದಾಧಿಕಾರಿಗಳು, ನೂತನವಾಗಿ ಘೋಷಿಸಿರುವ ಪೀರನವಾಡಿ ಪಟ್ಟಣ ಪಂಚಾಯಿತಿಯಲ್ಲಿಯೂ ನರೇಗಾ ಯೋಜನೆ ಆರಂಭಿಸುವಂತೆ ಆಗ್ರಹಿಸಿದರು.
ನಗರಪ್ರದೇಶಗಳಿಗೂ ಯೋಜನೆ ವಿಸ್ತರಿಸುವಂತೆ ಆಗ್ರಹಿಸಿ ನಾವು ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಂಡಿದ್ದೇವೆ. ಪೀರನವಾಡಿ ಗ್ರಾಪಂಅನ್ನು ಪಟ್ಟಣ ಪಂಚಾಯಿತಿಯಾಗಿ ಸರ್ಕಾರ ಘೋಷಿಸಿದೆ. ಈ ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ನರೇಗಾ ಯೋಜನೆಯಡಿ ಕೆಲಸ ಮಾಡಿ ತಮ್ಮ ಜೀವನ ನಡೆಸುತ್ತಿದ್ದರು. ಹೀಗಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನರೇಗಾ ಕಾಮಗಾರಿ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘಟನೆ ಸಂಸ್ಥಾಪಕ ಸದಸ್ಯ ದಿಲೀಪ ಕಾಮತ, ವಿಶ್ವೇಶ್ವರಯ್ಯ ಹಿರೇಮಠ, ಸುನೀತಾ ಅಂಬಿಗೇರ, ರೇಶ್ಮಾ ಹಂಬಿನಮನಿ, ಗಂಗೂಲಿ ಶಹಾಪುರ, ವೈಷ್ಣವಿ ಪಾಟೀಲ, ಶ್ರದ್ಧಾ ಪಾಟೀಲ, ಲಕ್ಷ್ಮೀ ಅನಗೋಳಕರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.