

ಸಿರಗುಪ್ಪ: ಕೆಂಚನಗುಡ್ಡ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ಶನಿವಾರವೂ ಸಹಸ್ರಾರು ಭಕ್ತರು ಪುಷ್ಕರ ಸ್ನಾನ ಮಾಡಿದರು.
ಬಹುತೇಕರು ಬೆಳಗಿನ ಜಾವವೇ ಆಗಮಿಸಿದ್ದರಿಂದ ನದಿ ದಡದಲ್ಲಿ ಜನಸಂದಣಿ ಹೆಚ್ಚಿತ್ತು. ನದಿ ತೀರದಲ್ಲಿರುವ ಶ್ರೀ ವಸುಧೇಂಧ್ರ ತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತಾಭಿಷೇಕ, ನೈವೇದ್ಯ ಸಮರ್ಪಣೆ, ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಬೃಂದಾವನಕ್ಕೆ ಬೆಳ್ಳಿ ಕವಚಗಳಿಂದ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ ನಂತರ ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದು ತೀರ್ಥ, ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಅರ್ಚಕರು ಶ್ರೀ ವಸುದೇಂಧ್ರ ತೀರ್ಥರ ಉತ್ಸವ ಮೂರ್ತಿಯನ್ನು ಒಂದು ಗಂಟೆ ಹದಿನೈದು ನಿಮಿಷಕ್ಕೆ ನದಿಗೆ ಕರೆತಂದು ಗಂಗೆಸ್ನಾನ ಮಾಡಿಸಿ, ಪೂಜೆ, ಮಹಾಮಂಗಳಾರತಿ ಬೆಳಗಿದರು. ಅರ್ಚಕ ರಂಗನಾಥ ಆಚಾರ್ಯ, ವೆಂಕಟೇಶ್ ಆಚಾರ್ಯ, ಎಚ್.ಬಿ.ಶಾಮಸುಂದರ ಆಚಾರ್ಯ ಇತರರಿದ್ದರು.