ಹುಬ್ಬಳ್ಳಿಯಲ್ಲಿ ಪುಣ್ಯಸಾಗರ ಮುನಿಮಹಾರಾಜರ ಚಾತುರ್ಮಾಸ್ಯ

Published on

ಹುಬ್ಬಳ್ಳಿ: ಇಲ್ಲಿಯ ಸ್ಟೇಶನ್ ರಸ್ತೆ ದಿಗಂಬರ ಜೈನ್ ಬೋರ್ಡಿಂಗ್ ನಲ್ಲಿ ಬ್ರಾಹ್ಮಿಲಾ ಮಹಿಳಾ ಪರಿಷತ್ ಆಶ್ರಯದಲ್ಲಿ ಜುಲೈ 28ರಿಂದ 108 ಪುಣ್ಯಸಾಗರ ಮುನಿಮಹಾರಾಜರ 28ನೇ ವರ್ಷದ ಚಾತುರ್ಮಾಸ್ಯ ಸಮಾರಂಭ ಏರ್ಪಡಿಸಲಾಗಿದೆ ಎಂದು ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1 ಗಂಟೆಯಿಂದ ಧಾಮಿರ್ಕ ಕಾರ್ಯಕ್ರಮಗಳು ಆರಂಭವಾಗಲಿವೆ. ಚಾತುರ್ಮಾಸ್ಯದಲ್ಲಿ ಕಳಸ ಸ್ಥಾಪನೆ, ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ಇದು 28ನೇ ಚಾತುರ್ಮಾಸ್ಯ ಸಮಾರಂಭವಾಗಿದೆ. 28 ಕಳಸ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಜು. 28ರಂದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಪ್ರವಚನ ನಡೆಯಲಿದೆ. ಕರ್ನಾಟಕ ಹಾಗೂ ವಿವಿಧ ರಾಜ್ಯಗಳಿಂದ ಸುಮಾರು 3 ಸಾವಿರ ಜೈನ ಹಾಗೂ ವಿವಿಧ ಧರ್ಮದ ಜನರು ಸಹ ಭಾಗಹಿಸಲಿದ್ದಾರೆ ಎಂದು ತಿಳಿಸಿದರು.

ಚಾತುರ್ಮಾಸ್ಯವು ನಾಲ್ಕು ತಿಂಗಳು ಕಾಲ ನಡೆಯಲಿದೆ. ಪ್ರತಿ ಭಾನುವಾರ ವಿಶೇಷ ಕಾರ್ಯಕ್ರಮ, ಉಪನ್ಯಾಸ ಆಯೋಜಿಸಲಾಗಿದೆ. ಸಾನ್ನಿಧ್ಯವನ್ನು ಹೊಂಬುಜ ಡಾ. ದೇವೇಂದ್ರಕೀರ್ತಿ ಸ್ವಾಮೀಜಿ, ವರೂರಿನ ಧರ್ಮಸೇನ ಭಟ್ಟಾರಕರು, ಸೋಂದಾದ ಭಟ್ಟಾಕಲಂಕ ಭಟ್ಟಾರಕರು, ಎನ್.ಆರ್. ಪುರದ ಲಕ್ಷ್ಮಿಸೇನ ಭಟ್ಟಾರಕರು, ಕೊಲ್ಲಾಪುರದ ಲಕ್ಷ್ಮಿಸೇನ ಭಟ್ಟಾರಕರು ವಹಿಸಲಿದ್ದಾರೆ ಎಂದರು.

ಚಾತುರ್ಮಾಸ್ಯದ ನಾಲ್ಕು ತಿಂಗಳು ಧರ್ಮ ಪ್ರಚಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೇರೆಬೇರೆ ಶ್ರಾವಕರ ಜೊತೆ ಧರ್ಮದ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಬೋರ್ಡಿಂಗ್ ಉಪಾಧ್ಯಕ್ಷ ಆರ್.ಟಿ. ತವನಪ್ಪನವರ, ಪ್ರಶಾಂತ ಶೆಟ್ಟಿ, ದೇವೇಂದ್ರಪ್ಪ ಕಾಗೇನವರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net