ಪುಟ್ಟರಾಜರ ಪುಣ್ಯ ಸ್ಮರಣೋತ್ಸವ, ಪ್ರಶಸ್ತಿ ಪ್ರದಾನ 17ರಂದು

PUTTARAJ
Published on

ಹಾನಗಲ್ಲ: ಗಾನಯೋಗಿ ಪಂ.ಪಂಚಾಕ್ಷರ ಗವಾಯಿಗಳ ಹಾಗೂ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯ ಸ್ಮರಣೋತ್ಸವ ಮತ್ತು ಪ್ರಶಸ್ತಿ ಪ್ರದಾನ, ಸಂಗೀತೋತ್ಸವ ಕಾರ್ಯಕ್ರಮವನ್ನು ಸೆ. 17ರಂದು ತಾಲೂಕಿನ ದೇವರಹೊಸಪೇಟೆಯಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಜ್ಞಾನಜ್ಯೋತಿ ಪಂ.ಪುಟ್ಟರಾಜ ಗವಾಯಿ ಚಾರಿಟಬಲ್ ಸಮಗ್ರ ಸೇವಾ ಟ್ರಸ್ಟ್್ಟ ಗದಗ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂ.ಪುಟ್ಟರಾಜರ ಜೀವನ ದರ್ಶನ ಪ್ರವಚನ ಆರಂಭಗೊಂಡಿದ್ದು, ಸೆ. 16ರಂದು ಸಮಾರೋಪಗೊಳ್ಳಲಿದೆ. ಸೆ. 17ರಂದು ಬೆಳಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಂಭುಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಲಿದ್ದಾರೆ.

ರಾಜ್ಯ ಪ್ರಶಸ್ತಿ ಪುರಸ್ಕೃತರು : ಹಾನಗಲ್ಲಿನ ಲಿಂ.ಕುಮಾರ ಶಿವಯೋಗಿಗಳವರ ತಾಯಿ ಅವರ ಹೆಸರಿನಲ್ಲಿ ನೀಡಲಾಗುವ ನೀಲಾಂಬಿಕೆ ಪ್ರಶಸ್ತಿಗೆ ಚಿತ್ರದುರ್ಗದ ಲಲಿತಮ್ಮ ರುದ್ರಯ್ಯ ಹಿರೇಮಠ ಭಾಜನರಾಗಿದ್ದಾರೆ. ಗಾನಯೋಗಿ ಲಿಂ.ಪಂ.ಪಂಚಾಕ್ಷರಿ ಗವಾಯಿಗಳ ತಾಯಿ ಅವರ ಹೆಸರಿನಲ್ಲಿ ಕೊಡಮಾಡುವ ನೀಲಮ್ಮನವರ ಪ್ರಶಸ್ತಿಗೆ ಬೆಂಗಳೂರಿನ ರಂಗಭೂಮಿ ಹಾಗೂ ಚಿತ್ರರಂಗ ಕಲಾವಿದೆ ಶಾರದಾ ಜಗದೀಶ ಹಿರೇಮಠ ಆಯ್ಕೆಯಾಗಿದ್ದಾರೆ. ಲಿಂ.ಡಾ.ಪುಟ್ಟರಾಜ ಕವಿ ಗವಾಯಿಗಳ ತಾಯಿ ಅವರ ಹೆಸರಿನಲ್ಲಿ ಕೊಡಮಾಡುವ ಸಿದ್ದಮ್ಮನವರ ಪ್ರಶಸ್ತಿಗೆ ಬೆಂಗಳೂರಿನ ರಂಗಭೂಮಿ ಹಾಗೂ ಚಿತ್ರರಂಗ ಕಲಾವಿದೆ ಜಯಶ್ರೀ ರಾಜು ಪಾತ್ರರಾಗಿದ್ದಾರೆ. ಲಿಂ.ಸಾವಿತ್ರಮ್ಮ ಚಂದ್ರಶೇಖರಯ್ಯ ವೆಂಕಟಾಪುರಮಠ ಅವರ ಸ್ಮರಣಾರ್ಥ ಕೊಡಮಾಡುವ ಡಾ.ಪಂ.ಪುಟ್ಟರಾಜ ಗೌರವ ಪುರಸ್ಕಾರಕ್ಕೆ ಧಾರವಾಡದ ಹಿರಿಯ ಸಂಗೀತ ಕಲಾವಿದ ಪಂ.ಸೋಮನಾಥ ಮರಡೂರ ಭಾಜನರಾಗಿದ್ದಾರೆ.

ಇತರ ಪ್ರಶಸ್ತಿಗಳು: ಇದೇ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಂ.ವೇ.ಮೂ.ಪ್ರಭಯ್ಯಶಾಸ್ತ್ರಿಗಳು ಹಿರೇಮಠ (ಪ್ರವಚನ ಪ್ರವೀಣ), ನಬಿ ಯಲಬುರ್ಗಿ(ಸಾಹಿತ್ಯ ಕ್ಷೇತ್ರ), ಹೂವಿನಹಡಗಲಿಯ ಕಲಾವಿದ ರಾಟಿ ಬಣಕಾರ ನಿಂಗಪ್ಪ (ರಂಗಭೂಮಿ ಪಂ.ಪುಟ್ಟರಾಜ ಪುರಸ್ಕಾರ), ದೇವರಹೊಸಪೇಟೆಯ ಚನ್ನಬಸಪ್ಪ ಗದಿಗೆಪ್ಪ ಶ್ಯಾಬಳ, ಶಂಕರಪ್ಪ ಸಾತಣ್ಣನವರ, ಈರವ್ವ ಚನ್ನಬಸಪ್ಪ ಮಂತ್ರೋಡಿ, ಸಿದ್ದಪ್ಪ ತಟ್ಟೆಪ್ಪ ಭಜಂತ್ರಿ (ಸಮಾಜ ಸೇವಾ ಪುಟ್ಟರಾಜಶ್ರೀ ಪುರಸ್ಕಾರ), ಸಿಂಧನೂರಿನ ಶಿಕ್ಷಕ ಶ್ರೀಕಾಂತ ಮಲ್ಲಪ್ಪ ಅಂಬಿಗೇರ, ಬ್ಯಾಡಗಿಯ ಶಿಕ್ಷಕ ಮಲ್ಲೇಶಪ್ಪ ಕರಿಗೌಡ ಶಿಡೇನೂರ (ಆದರ್ಶ ಶಿಕ್ಷಕ) ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕ ಶಿವರಾಜ ಸಜ್ಜನ, ಗಣ್ಯರಾದ ಪದ್ಮನಾಭ ಕುಂದಾಪುರ, ಅಂಬಿಕಾ ಜಾರಕಿಹೊಳಿ, ರಾಜಶೇಖರಗೌಡ ಕಟ್ಟೇಗೌಡ್ರ, ವರುಣಗೌಡ ಪಾಟೀಲ, ರುದ್ರಯ್ಯ ವೆಂಕಟಾಪುರಮಠ, ಪಂಚಾಕ್ಷರಿಸ್ವಾಮಿ ಹಿಡ್ಕಿಮಠ, ಗ್ರಾಪಂ ಅಧ್ಯಕ್ಷೆ ಗೀತಾ ಭೈರಣ್ಣನವರ, ಬಸಮ್ಮ ಕ್ಯಾಬಳ್ಳಿ, ಶೇಖಪ್ಪ ಮಹರಾಜಪೇಟೆ, ರಾಜಶೇಖರ ಮಂತ್ರೋಡಿ, ರುದ್ರಪ್ಪ ಪೂಜಾರ, ಚಂದ್ರು ಪೂಜಾರ, ಮಲ್ಲೇಶಪ್ಪ ಸಣಬಸಪ್ಪನವರ, ರಾಜಣ್ಣ ಕುರಡಗಿ, ಕುಮಾರೇಶ ಕ್ಯಾಬಳ್ಳಿ, ಹನುಮಂತಪ್ಪ ಭಜಂತ್ರಿ, ಕುಮಾರಸ್ವಾಮಿ ವೆಂಕಟಾಪುರಮಠ, ಶಿವಾಚಲಶಾಸ್ತ್ರಿಗಳು ಗದಗ ಇತರರು ಅತಿಥಿಗಳಾಗಿ ಆಗಮಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net