

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪುಂಜಾಲಕಟ್ಟೆ ಕೆಪಿಎಸ್ ಶಾಲೆಯ ಕಾರ್ಯವೈಖರಿ ಜಿಲ್ಲೆಗೆ ಮಾದರಿಯಾಗಿದ್ದು ಜನತೆಗೆ ಹೆಮ್ಮೆಯ ಸಂಗತಿ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಪದ್ಮನಾಭ ಹೇಳಿದರು.
ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಬಳಿಕ ನನ್ನ ಮಗು-ನನ್ನ ಗಿಡ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಿಗೆ ಗಿಡ ನೀಡುವ ಮೂಲಕ ಎಸ್‌ಡಿಎಂಸಿ ಸದಸ್ಯ ದಿವಾಕರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಂದ ಗಿಡಗಳನ್ನು ಪ್ರದರ್ಶಿಸಿ ಪಥ ಸಂಚಲ ನಡೆಯಿತು. ಜತೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್‌ಪ್ರಸಾದ್ ಸಂಪಿಗೆತಾಯ, ಪ್ರಾಥಮಿಕ ಶಾಲಾ ಮುಖ್ಯಸ್ಥ ಸುರೇಶ್ ಶೆಟ್ಟಿ, ಅಧ್ಯಾಪಕ ಬಳಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯಕುಮಾರ್ ಬಿ ವಹಿಸಿದ್ದರು. ನಿರಂಜನ್ ಜೈನ್ ಸ್ವಾಗತಿಸಿದರು. ಹರಿಪ್ರಸಾದ್ ವಂದಿಸಿದರು. ಧರಣೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು.