

ತುಮಕೂರು : ಯುವರತ್ನ ಸಿನಿಮಾ ಪ್ರಮೋಷನ್‌ಗಾಗಿ ಏಳು ತಿಂಗಳ ಹಿಂದಷ್ಟೇ ಕಲ್ಪತರು ನಾಡಿಗೆ ಭೇಟಿ ಕೊಟ್ಟಿದ್ದ ಪುನೀತ್ ರಾಜಕುಮಾರ್ ‘ತುಮಕೂರು ನನ್ನ ಹೃದಯಕ್ಕೆ ಹತ್ತಿರ’ ಎಂದಿದ್ದರು. ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠಕ್ಕೂ ತೆರಳಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದ ಅವರು, ಅಂದು ಸಂಜೆ ಶ್ರೀಮಠದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಆ ವೇಳೆ ‘ದೇಶಕ್ಕೆ ಯೋಧ, ನಾಡಿಗೆ ರೈತ... ಬಾಳಿಗೆ ಗುರು ಒಬ್ಬಾತ..’ ಪಾಠ ಶಾಲಾ ಹಾಡು ಹೇಳಿ ಶ್ರೀಮಠದ ಗುರುಕುಲಕ್ಕೆ ವಿಶೇಷ ನಮನ ಸಲ್ಲಿಸಿದ್ದರು.
ಮಾರ್ಚ್ 22ರಂದು ಜಿಲ್ಲೆಗೆ ಸಿನಿಮಾ ಪ್ರಮೋಷನ್‌ಗಾಗಿ ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ‘ಪವರ್‌ಫುಲ್’ ಸ್ವಾಗತ ಸಿಕ್ಕಿತ್ತು. ಆ ದಿನ ಎಸ್‌ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪುನೀತ್ ರಾಜಕುಮಾರ್, ‘ತುಮಕೂರು ನನ್ನ ಹೃದಯಕ್ಕೆ ಹತ್ತಿರ’ ಇದೆ ಎಂದು ಹೇಳಿದ್ದು ಇನ್ನೂ ಹಚ್ಚಹಸಿರಾಗಿದೆ.
ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್‌ಆನಂದ್, ನಟ ರವಿಶಂಕರ್, ಧನಂಜಯ್ ಮತ್ತಿತರರು ಪುನೀತ್ ರಾಜಕುಮಾರ್‌ಗೆ ಸಾಥ್ ನೀಡಿದ್ದರು.
ದೊಡ್ಮನೆ ಹುಡ್ಗ ಹಾಡಿನ ಸಿಡಿ! : 2016ರಲ್ಲಿ ಸೂರಿ ನಿರ್ದೇಶನದ ದೊಡ್ಮನೆ ಹುಡ್ಗ ಚಿತ್ರದ ‘ಅಭಿಮಾನಿಗಳೇ ‘ನಮ್ಮನೆ ದೇವರು’ ಹಾಡಿನ ಸಿಡಿ ರಿಲೀಸ್ ಅನ್ನು ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿಸಲಾಗಿತ್ತು. ಆ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದಕ್ಕೆ ಪುನೀತ್ ಪಾತ್ರರಾಗಿದ್ದರು. ಅಂಬರೀಷ್, ಭಾರತಿ ವಿಷ್ಣುವರ್ಧನ್, ನಿರ್ದೇಶಕ ಸೂರಿ ಇದ್ದರು. ಈ ವೇಳೆ ಶ್ರೀಮಠದ ದಾಸೋಹಕ್ಕೆ 2 ಲಕ್ಷ ರೂ., ದೇಣಿಗೆಯನ್ನು ಪುನೀತ್ ನೀಡಿದ್ದನ್ನು ಸ್ಮರಿಸಬಹುದು.