

ಉಡುಪಿ: ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಅಭಿಮಾನಿಯೊಬ್ಬರು ತಮ್ಮ ರಿಕ್ಷಾದಲ್ಲಿ ಪುನೀತ್ ಭಾವಚಿತ್ರ ಅಳವಡಿಸಿ ಜಿಲ್ಲೆಯ ವಿವಿಧಡೆ ಮೆರವಣಿಗೆ ನಡೆಸಿ ಅಭಿಮಾನ ಮೆರೆದಿದ್ದಾರೆ.
ಗರಡಿಮಜಲು ನಿವಾಸಿ ಕನ್ನಡ ನಾಗರಾಜ್ ತಮ್ಮ ದೈನಂದಿನ ಕಾಯಕವನ್ನು ಸ್ಥಗಿತಗೊಳಿಸಿ, ಪುನೀತ್ ಅಭಿನಯದ ಎಲ್ಲಾ ಚಿತ್ರಗಳ ಪೋಸ್ಟರ್‌ಗಳನ್ನು ಅಳವಡಿಸಿ ರಿಕ್ಷಾ ಸುತ್ತಲೂ ಅಳವಡಿಸಿ ಉಡುಪಿ ನಗರ, ಸಂತೆಕಟ್ಟೆ, ಕಟಪಾಡಿ, ಕಾಪು, ಮೂಲ್ಕಿ ಮೊದಲಾದ ಕಡೆಗಳಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ ಆಟೋ ನಿಲ್ಲಿಸಿ, ಜನರಿಗೆ ಪುನೀತ್ ಅವರ ಸಾಧನೆಗಳನ್ನು ವಿವರಿಸುತ್ತಿದ್ದರು.
ನಾನು ಪುನೀತ್ ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಆದರೆ ಅವರು ಜೀವನದಲ್ಲಿ ತುಂಬಾ ದಾನ-ಧರ್ಮಗಳನ್ನು ಮಾಡಿದ್ದಾರೆ ಎಂಬುದು ಅವರ ಸಾವಿನ ಬಳಿಕ ತಿಳಿಯಿತು. ಅವರು ಇದ್ದಾಗ ಅವರ ಕೊಡುಗೆಗಳು ಗೊತ್ತಾಗಿಲ್ಲ. ಇದು ಅವರ ಹಿರಿಮೆ. ಅವರು ತಂದೆಗೆ ತಕ್ಕ ಮಗನಾಗಿದ್ದರು. ಇವತ್ತು ಅವರ ಜನ್ಮದಿನದ ಅಂಗವಾಗಿ ರಿಕ್ಷಾದಲ್ಲಿ ಬಾಡಿಗೆ ಮಾಡದೆ ಅವರ ಸಾಧನೆಗಳನ್ನು ತಿಳಿಸುವ ಉದ್ದೇಶದಿಂದ ಊರೂರು ತಿರುಗುತ್ತಿದ್ದೇನೆ ಎಂದು ತಿಳಿಸಿದರು.