ಪುನೀತ್ ಸಾಧನೆ ಎಲ್ಲರಿಗೂ ಮಾದರಿ

30kgl-2.,,
Published on

ಕೊಳ್ಳೇಗಾಲ: ಚಿತ್ರನಟ ದಿ. ಪುನೀತ್ ರಾಜ್‌ಕುಮಾರ್ ಅವರ ಜೀವನ, ಸಾಧನೆ ಮಾದರಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಜೋಗಿ ರಂಗಜೋಳಿಗೆ ಮತ್ತು ಅಪ್ಪು ಟೀಂ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ನೆನಪಿನ ಸಾಗರದಲ್ಲಿ 2 ವರ್ಷ ‘ಚಿರಂತನ ಚೇತನದ ನಿರಂತರ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಳವೆಯಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪುನೀತ್ ಸಮಾಜ ಸೇವಾ ಕಾರ್ಯಗಳನ್ನು ಜೀವನದ ಉದ್ದಕ್ಕೂ ಮಾಡಿದ್ದಾರೆ. ಅವರು ನಮ್ಮನ್ನು ಅಗಲಿದ ಮೇಲೆ ಅವರ ವ್ಯಕ್ತಿತ್ವ, ಸಾಧನೆ ಒಂದೊಂದಾಗಿ ತಿಳಿಯಿತು. ಅಪ್ಪು ಜೀವನ ಸಾಮಾನ್ಯ ಜನರಿಗೆ ದಾರಿ ದೀಪದಂತಿದೆ ಎಂದರು.
ಅಪ್ಪು ಸಾವನ್ನು ಯಾರೂ ಊಹಿಸಿರಲಿಲ್ಲ. ಅಪ್ಪು ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರು ಯುವಕರಿಗೆ ಮಾದರಿಯಾಗಿದ್ದರು. ಕನ್ನಡಿಗರ ಮನದಲ್ಲಿ ಎಂದೆಂದೂ ಅವರು ಚಿರಂಜೀವಿ ಎಂದು ಬಣ್ಣಿಸಿದರು.
ಉದ್ಯಮಿ ಓಲೆ ಮಹದೇವ ಮಾತನಾಡಿ, ಅಪ್ಪು ನಮ್ಮನ್ನು ಅಗಲಿ 2 ವರ್ಷವಾದರೂ ಅವರ ಸಮಾಜಮುಖಿ ಕಾರ್ಯಗಳು ಜೀವಂತವಾಗಿವೆ ಎಂದರು.
ಮನವಿ: ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಕಾಲೇಜು ಮುಂಭಾಗ ಹಾದು ಹೋಗಿರುವ ಜೋಡಿ ರಸ್ತೆಗೆ ಡಾ.ಪುನೀತ್ ರಾಜ್‌ಕುಮಾರ್ ಹೆಸರಿಡಬೇಕೆಂದು ಅಭಿಮಾನಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net