

ಕಾರವಾರ: ಬುದ್ಧಿಮಾಂದ್ಯ ಯುವತಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಅಪರಾಧಿಗೆ ಶಿರಸಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ, ಸಂತ್ರಸ್ಥೆಗೆ 50 ಸಾವಿರ ರೂ.ಪರಿಹಾರ ನೀಡುವಂತೆ ಆದೇಶಿಸಿದೆ.
ಸಿದ್ದಾಪುರದ ವೀರಭದ್ರ ತಿಮ್ಮ ನಾಯ್ಕ (55) ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾನೆ. ಈತ ಕಳೆದ ವರ್ಷ ಬುದ್ದಿಮಾಂದ್ಯ ಯುವತಿಗೆ ಚಾಕಲೇಟ್ ಕೊಡುವುದಾಗಿ ನಂಬಿಸಿ ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾದ ಆಲಿಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠಾಸೀನ ಶಿರಸಿಯ ನ್ಯಾಯಾಧೀಶರಾದ ಕಿರಣ್ ಕಿಣಿ ಇವರು ಈ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರೊಸಿಕ್ಯೂಟರ್ ರಾಜೇಶ್ ಎಂ ಮಳಗಿಕರ್ ವಾದಿಸಿದ್ದರು.