ಮಕ್ಕಳ ಹಕ್ಕು ಉಲ್ಲಂಘಿಸಿದಲ್ಲಿ ಶಿಕ್ಷೆಗೆ ಗುರಿ

RemasterDirector_1a5c03258
_autotone
Published on

ಪಿರಿಯಾಪಟ್ಟಣ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೇಶ್ ತಿಳಿಸಿದರು.


ಪಟ್ಟಣದ ಎಸ್‌ಕೆಎಸ್‌ಟಿ ಸರ್ಕಾರಿ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಲ್ಪಿಸಬೇಕು. ಬಾಲ್ಯವಿವಾಹ, ಲೈಂಗಿಕ ಕಿರುಕುಳ, ಮಕ್ಕಳನ್ನು ಶೋಷಣೆಗೆ ಒಳಪಡಿಸುವುದು, ಬಾಲಕಾರ್ಮಿಕರನ್ನು ಆರ್ಥಿಕ ಉದ್ದೇಶಗಳಿಗಾಗಿ ದುಡಿಸಿಕೊಳ್ಳವುದು ಮತ್ತು ಅಕ್ರಮವಾಗಿ ಮಕ್ಕಳ ಸಾಗಣೆ ಕಾನೂನು ವಿರೋಧಿ ಕೃತ್ಯವಾಗಿದ್ದು ಇವುಗಳಿಂದ ರಕ್ಷಣೆ ಪಡೆಯುವ ಹಕ್ಕು ಪ್ರತಿ ಮಕ್ಕಳಿಗಿದೆ ಎಂದು ತಿಳಿಸಿದರು.


ಸರ್ಕಾರಿ ಸಹಾಯಕ ಅಭಿಯೋಜಕ ಆರ್.ಕೆ.ಶ್ರೀನಾಥ್ ಮಾತನಾಡಿ, ಖಾಸಗಿ ಕಂಪನಿ, ಸಂಸ್ಥೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಮತ್ತು ಉತ್ತೇಜನ ನೀಡುವವರನ್ನು ಸಹ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಎಚ್ಚರಿಸಿದರು.


ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿ, ಸಂವಿಧಾನದಲ್ಲಿ ಮಕ್ಕಳಿಗಾಗಿ ಏನೆಲ್ಲ ಹಕ್ಕುಗಳಿವೆ, ಅವು ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಿಗುವಂತಾಗಬೇಕು. ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ದೊರೆತು ಬಡತನ ದೂರವಾಗಬೇಕು. ಉತ್ತಮ ಆರೋಗ್ಯ ದೊರೆತು ಮಕ್ಕಳು ಸದೃಢರಾಗಬೇಕು ಎಂದ ಅವರು, ಶಾಲೆಯ ಸಮಯದಲ್ಲಿ ಪಾಲಕರು ಕಠಿಣವಾದ ಕೆಲಸಕ್ಕಾಗಿ ಮಕ್ಕಳನ್ನು ಬಳಸಿಕೊಂಡರೆ ಮುಂದಿನ ಸಮಾಜಕ್ಕೆ ಮಕ್ಕಳು ಕೊಡುಗೆ ಏನು ನೀಡಲು ಸಾಧ್ಯವಾಗುವುದಿಲ್ಲ ಎಂದರು.


ರೋಟರಿ ಮಿಡ್ ಟೌನ್ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿದರು. ಉಪ ಪ್ರಾಂಶುಪಾಲ ಮಹದೇವ್, ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಪ್ರಶಾಂತ್, ರೋಟರಿ ಮಿಡ್ ಟೌನ್‌ನ ಮಾಜಿ ಅಧ್ಯಕ್ಷರಾದ ವಿನಯ್ ಶೇಖರ್, ಬಿ.ವಿ.ಜವರೇಗೌಡ, ಬಸವೇಗೌಡ, ಸದಸ್ಯರಾದ ಬಿ.ಎಸ್.ಹರೀಶ್‌ಗೌಡ, ಪ್ರಕಾಶ್, ಶಿಕ್ಷಕರಾದ ಶಿವಣ್ಣ, ಕುಮಾರ್, ಪುಷ್ಪಾ, ಪ್ರಕಾಶ್, ಮಹದೇವ್ ಸೇರಿದಂತೆ ಶಾಲೆಯ ವಿದ್ಯಾರ್ಥಿನಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net