ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿಕ್ಷೆ

Court
ಶಿವಮೊಗ್ಗ ನ್ಯಾಯಾಲಯ ಸಂಕೀರ್ಣ
Published on

ಶಿವಮೊಗ್ಗ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಕೆ ಹಾಕಿದ 62 ವರ್ಷದ ವ್ಯಕ್ತಿಗೆ ಶಿವಮೊಗ್ಗ ಎರಡನೇ ಜೆಎಂಎಫ್‌ಸಿ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಒಂದುವರೆ ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿದ್ದಾರೆ.

2016ರಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬ 27 ವರ್ಷದ ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆಕೆಯ ಫೋಟೋಗಳನ್ನು ಇಟ್ಟುಕೊಂಡು, ಒಂದು ವೇಳೆ ದೂರು ನೀಡಿದರೆ ನಿನ್ನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಮಹಿಳೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ವಿಚಾರಣಾಧಿಕಾರಿಯಾಗಿದ್ದ ಕೋಟೆ ವೃತ್ತದ ಸಿಪಿಐ ವ್ಯಕ್ತಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ತಪ್ಪಿತಸ್ಥನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 36 ಸಾವಿರ ರೂ.ಗಳನ್ನು ನೊಂದ ಮಹಿಳೆಗೆ ನೀಡುವಂತೆ ತಿಳಿಸಿದ್ದಾರೆ. ಕಿರಣ್ ಕುಮಾರ್ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net