ನಿಯಮ ಮೀರಿ ತಂಬಾಕು ಮಾರಿದರೆ ಶಿಕ್ಷೆ: ಎಡಿಸಿ ಡಾ.ಪಿ.ಶಿವರಾಜು ಎಚ್ಚರಿಕೆ

22
Published on

ಮೈಸೂರು: ಸರ್ಕಾರದ ನಿಯಮ ಮೀರಿ ಶಾಲಾ- ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಶಾಲಾ- ಕಾಲೇಜಿನ ಸುತ್ತ-ಮುತ್ತ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಸೇರಿದಂತೆ ಇನ್ನಿತರ ಮಾದಕ ವಸ್ತು ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅಂತಹ ವ್ಯಕ್ತಿ ಅಥವಾ ಅಂಗಡಿಯ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂಬಾಕು ಸೇವನೆಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಸುತ್ತ-ಮುತ್ತ ಇರುವ ಪೆಟ್ಟಿ ಅಂಗಡಿಗಳು ಹಾಗೂ ವ್ಯಕ್ತಿಗಳು ಯಾರಿಗೂ ತಿಳಿಯದಂತೆ ಅವುಗಳನ್ನು ಮಕ್ಕಳಿಗೆ ಮಾರಾಟ ಮಾಡುತ್ತಿರುವುದೇ ಕಾರಣವಾಗಿದೆ. ಇದರಿಂದ ಮಕ್ಕಳನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ತಂಬಾಕು ಸೇವನೆ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳಿಗೆ ಅವುಗಳ ಮೂಲಕ ಜಾಗೃತಿ ಮೂಡಿಸಬೇಕು. ಇದನ್ನು ಅಧಿಕಾರಿಗಳು ನಿರ್ಲಕ್ಷಿಸಿದರೆ ಮುಂದೆ ನಮ್ಮ ಮಕ್ಕಳೇ ಚಟಕ್ಕೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಇಂದಿನಿಂದಲೇ ನಿಯಮಬಾಹಿರ ತಂಬಾಕು ಮಾರಾಟ ಹಾಗೂ ಸೇವನೆ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.
ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವಂತಹ ಅಂಗಡಿಯ ಪರವಾನಗಿ ರದ್ದು ಮಾಡಿ, ಅಂಗಡಿ ಮಾಲೀಕನಿಗೆ ದಂಡ ವಿಧಿಸಬೇಕು. ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರಿಗೆ ದಂಡ ಹಾಕಬೇಕು. ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯ ತಂಬಾಕು ಸೇವನೆಯ ಪ್ರಮಾಣದಲ್ಲಿ ನಾವು ನಿಯಂತ್ರಣದ ಹಂತದಲ್ಲಿದ್ದು, ಮುಂದೆ ನಿರ್ಮೂಲನೆಯ ಹಂತ ತಲುಪಿ ಯುವ ಪೀಳಿಗೆ ಹಾಗೂ ಮಕ್ಕಳನ್ನು ತಂಬಾಕು ಸೇವನೆ ಚಟದಿಂದ ಬಿಡಿಸಬೇಕು ಎಂದರು.
ಯಾವುದೇ ತಂಬಾಕು ಸಂಸ್ಥೆಗಳು ತಮ್ಮ ಬ್ರಾಂಡ್ ಹಾಗೂ ಥೀಮ್ ಗಳನ್ನು ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಕೆಲವು ಶಾಪ್‌ಗಳಲ್ಲಿ ತಂಬಾಕು ಸಂಬಂಧಿಸಿದ ಜಾಹೀರಾತುಗಳು ಏನಾದರೂ ಇದ್ದರೆ ಅವುಗಳನ್ನು ತಕ್ಷಣವೇ ತೆರವುಗೊಸುವಂತೆ ಅಂಗಡಿ ಅಥವಾ ಶಾಪ್ ಮಾಲೀಕನಿಗೆ ತಿಳಿಸಬೇಕು ಎಂದು ಹೇಳಿದರು.
ತಂಬಾಕು ಹಾಗೂ ಇತರ ಚಟಗಳಿಗೆ ಹೆಚ್ಚಾಗಿ ವ್ಯಸನಿಗಳಾಗುವವರು ಅನಕ್ಷರಸ್ಥರು ಹಾಗೂ ತಂಬಾಕಿನ ಪರಿಣಾಮದ ಬಗ್ಗೆ ಕಡಿಮೆ ಶಿಕ್ಷಣ ಹೊಂದಿರುವವರು. ಹಾಗಾಗಿ ಅಂತವರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ ತಂಬಾಕು ಸೇವನೆ ಮುಕ್ತರನ್ನಾಗಿ ಮಾಡಬೇಕು ಎಂದು ಹೇಳಿದರು.
ತಂಬಾಕು ನಿಯಂತ್ರಣ ತಂಡ ತಂಡದವರು ಜಿಲ್ಲೆಯಾದ್ಯಂತ ಕಾರ್ಯಾಚರಣೆ ಮಾಡುವ ಮೂಲಕ ನಿಯಮಬಾಹಿರವಾಗಿ ಸಾರ್ವಜನಿಕವಾಗಿ ಅಥವಾ ಯಾವುದೇ ಅಂಗಡಿಗಳಲ್ಲಿ ನೀಡಿರುವ ಜಾಹೀರಾತುಗಳನ್ನು ತೆರವುಗೊಳಿಸಬೇಕು. ತಂಬಾಕು ಮಾರಾಟ ಮಾಡುವ ಅಂಗಡಿಗಳನ್ನು ಗುರುತಿಸಿ ಅಂಗಡಿಗೆ ಸರಬರಾಜು ಮಾಡುತ್ತಿರುವ ತಂಬಾಕಿನ ಮೂಲ ಕಂಪನಿ ಅಥವಾ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸವಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net