

ಹಾಸನ: ರಾಜೀವ್‌ಗಾಂಧಿ ವಸತಿ ನಿಗಮದಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಪಿಎಂಎವೈ) ಮೂಲಕ ಮನೆ ಮಂಜೂರಾತಿಯಲ್ಲಿ ಅಕ್ರಮ ಎಸಗಿರುವವರು ಯಾರೇ ಆಗಲಿ ಅವರ ವಿರುದ್ಧ ಕ್ರಮದ ಜತೆಗೆ ಶಿಕ್ಷೆಯೂ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆಯಡಿ ಯಾರದೋ ಹೆಸರಿನಲ್ಲಿ ಮಂಜೂರಾಗಿರುವ ಮನೆಗಳ ಹಣವನ್ನು ಬೇರೆಯವರ ಹೆಸರಿಗೆ ವರ್ಗಾಯಿಸಿ ದುರ್ಬಳಕೆ ಮಾಡಲಾಗಿದೆ. ಇದೊಂದು ರೀತಿಯಲ್ಲಿ ದರೋಡೆ. ಮನೆ ಕಟ್ಟಿದ್ದಾರಾ, ಇಲ್ಲವಾ ಎಂದು ನೋಡಿಲ್ಲ, ಫಲಾನುಭವಿ ಅಲ್ಲದವರ ಅಕೌಂಟ್‌ಗೆ ಹಣ ಹಾಕಿ ಪಡೆದುಕೊಂಡಿದ್ದಾರೆ. ಜಿಲ್ಲಾ ನೋಡಲ್ ಅಧಿಕಾರಿ ರಾಜೇಶ್, ಹಗರಣದಲ್ಲಿ ಮಾಸ್ಟರ್‌ಮೈಂಡ್ ಎಂಬುದು ಮೇಲ್ನೋಟಕ್ಕೆ ಅನಿಸಿದೆ. ಸಕಲೇಶಪುರ ನಂತರ, ಅರಸೀಕೆರೆ ಒಂದು ಗ್ರಾಪಂನಲ್ಲಿ ಅಕ್ರಮ ಬೆಳಕಿಗೆ ಬಂದಿದ್ದು, ಈ ಸಂಬಂಧ ಅಲ್ಲಿನ ಪಿಡಿಒ ಅಮಾನತು ಮಾಡಿ ತನಿಖೆ ಮಾಡುವಂತೆಯೂ ಹೇಳಿದ್ದೇನೆ ಎಂದು ತಿಳಿಸಿದರು.
ಇದರ ಸೂತ್ರಧಾರ ತಲೆಮರೆಸಿಕೊಂಡಿದ್ದು, ಆತನ ಮೇಲೂ ಎಫ್‌ಐಆರ್ ಆಗಿದೆ. ಆತ ಎಲ್ಲೇ ಇದ್ದರೂ ಹುಡುಕಿ ಕೂಡಲೇ ಬಂಧಿಸುವಂತೆ ಎಸ್ಪಿ ಅವರಿಗೆ ಸೂಚಿಸಿದ್ದೇನೆ. ಅವರನ್ನು ಜೈಲಿಗೆ ಹಾಕೋದು ಮಾತ್ರವಲ್ಲ, ಶಿಕ್ಷೆಯೂ ಆಗಬೇಕು. ವಂಚನೆ ಪ್ರಕರಣವನ್ನೂ ಅವರ ಮೇಲೆ ಹಾಕಬೇಕೆಂದರು. ಈ ಸಂಬಂಧ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿದ್ದೇನೆ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದಿದ್ದೇನೆ ಎಂದು ತಿಳಿಸಿದರು.
ತಪ್ಪು ಮಾಡಿ ಅಕ್ರಮ ಮಾಡಿರುವ ಹಣವನ್ನು ವಾಪಸ್ ಕೊಟ್ಟರೆ ಮಾಫಿ ಮಾಡುವುದಿಲ್ಲ. ಆ ಹಣ ನಮಗೆ ಬೇಕಿಲ್ಲ. ಹಾಗೆ ಮಾಡಿದರೂ, ತಪ್ಪು ಮಾಡುವವರಲ್ಲಿ ಭಯ ಇರುವುದಿಲ್ಲ. ತಪ್ಪು ಮಾಡುತ್ತಲೇ ಇರುತ್ತಾರೆ. ಹಾಗಾಗಿ ಭ್ರಷ್ಟರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಕೆಲವು ಪಿಡಿಒಗಳಿಗೆ ಮಾಹಿತಿ ಇಲ್ಲ. ಆದರೆ ಅವರ ಲಾಗಿನ್ ದುರುಪಯೋಗ ಆಗಿದೆ. ಅಂಥವರಿಗೆ ತೊಂದರೆ ಆಗೋದು ಬೇಡ ಎಂದು ಸಿಇಒಗೆ ಹೇಳಿದ್ದೇನೆ. ಆದರೆ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಆಗಬೇಕು. ದಂಡನೆಗೆ ಗುರಿಯಾಗಲೇಬೇಕೆಂದರು.
ಇದೇ ವೇಳೆ ಬೇರೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ ಸಚಿವರು, ತಪ್ಪು ಗಮನಕ್ಕೆ ಬಂದರೆ ಸುಮ್ಮನೆ ಬಿಡಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆಯಾಗಬೇಕು. ಅಧಿಕಾರಿಗಳು ಅರ್ಥಮಾಡಿಕೊಂಡು ಉತ್ತಮ ಕೆಲಸ ಮಾಡಿದರೆ ನಾವು ಅವರ ಜತೆಗಿರುತ್ತೇವೆ. ದುರಾಡಳಿತ ನಡೆಸುವವರು, ಹಣ ಲೂಟಿ ಮಾಡಿದರೆ ಕ್ಷಮಿಸಲ್ಲ. ಅರ್ಥಮಾಡಿಕೊಂಡು ಕೆಲಸ ಮಾಡಿದರೆ ಒಳ್ಳೆಯದು. ತಪ್ಪು ಗೊತ್ತಾದರೆ ಬಿಡಲ್ಲ ಎಂದರು.
ಪಿಎಂಎಐ ಯೋಜನೆಯಲ್ಲಿ ಕೆಲ ನಮ್ಯತೆ ಇರುವುದನ್ನೇ ಕೆಲವರು ದುರುಪಯೋಗ ಪಡಿಸಿಕೊಂಡಿದ್ದಾರೆ. ತುಂಬ ಟ್ಯಾಲೆಂಟ್ ಬಳಕೆ ಮಾಡಿದ್ದಾರೆ. ಇದನ್ನು ಒಳ್ಳೆಯದಕ್ಕೆ ಬಳಸಿದರೆ ಸರ್ಕಾರ, ಜನರಿಗೆ ಒಳ್ಳೆಯದಾಗುತ್ತದೆ. ಈ ರೀತಿಯ ಅಕ್ರಮ ರಾಜ್ಯದ ಬೇರೆ ಕಡೆಯಲ್ಲೂ ಆಗಿರಬಹುದು. ಆ ಬಗ್ಗೆಯೂ ಪರಿಶೀಲಿಸುವುದಾಗಿ ಹೇಳಿದರು.