ಕೆಲಸಕ್ಕೆ ಬಾರದ ವೈದ್ಯರಿಗೆ ಶಿಕ್ಷೆ

h28-dr. arunkumar
Published on

ಮರಿದೇವ ಹೂಗಾರ ಹುಬ್ಬಳ್ಳಿ

ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವ ಕೆಲ ವೈದ್ಯರು, ಶುಶ್ರೂಷಕರು ಹಾಗೂ ಡಿ ದರ್ಜೆ ಸಿಬ್ಬಂದಿಗೆ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ( ಕಿಮ್್ಸ) ಬಿಸಿ ಮುಟ್ಟಿಸಿದೆ. ಸರತಿ ಪ್ರಕಾರ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಕಟ್ಟಪ್ಪಣೆ ವಿಧಿಸಿದ್ದು, ಆಯಾ ದಿನ ಯಾರು ವಾರ್ಡ್​ಗಳಿಗೆ ತೆರಳಬೇಕೆಂದು ಸೂಚನೆ ನೀಡಿದೆ.

ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವವರು ಕಿವಿ, ಮೂಗು, ಬಾಯಿ, ವೈದ್ಯಕೀಯ ಹಾಗೂ ಶ್ವಾಸಕೋಶ, ಅರವಳಿಕೆ/ಇಂಟೆನ್ಸಿವಿಸ್ಟ್ ವೈದ್ಯರು. ಆದರೂ 15 ವಿಭಾಗದ ವೈದ್ಯರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಏಕೆಂದರೆ ಇವರೆಲ್ಲ ಆಸ್ಪತ್ರೆ ಕೆಲಸದಿಂದ ದೂರ ಉಳಿಯುತ್ತಿದ್ದರು. ಹಾಗಾಗಿ, ಪಾಳಿ ಪ್ರಕಾರ ಕೆಲಸ ಮಾಡದೇ ದೂರ ಉಳಿದವರಿಗೆ ಶಿಕ್ಷೆ ವಿಧಿಸಲು ತೀರ್ವನಿಸಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 250 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಹಂತ ಹಂತವಾಗಿ ಬೆಡ್​ಗಳನ್ನು ಹೆಚ್ಚಿಸಲು ತೀರ್ವನಿ ಸಲಾಗಿದೆ. ಆದರೆ, ಇಲ್ಲಿಗೆ ಬರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಲ ವೈದ್ಯರು, ಶುಶ್ರೂಷಕರು ಹಿಂದೇಟು ಹಾಕುತ್ತ, ಒಂದಲ್ಲ ಒಂದು ನೆವ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಹೀಗಾಗಿ, ಕಿಮ್ಸ್​ನ ಹಿರಿಯ ಅಧಿಕಾರಿಗಳು ಬಿಗಿ ನಿಲುವು ತಳೆದಿದ್ದಾರೆ.

ಸುಳಿಯದ ವೈದ್ಯರು: ಕರೊನಾ ಸೋಂಕಿತರು ಕಿಮ್ಸ್​ಗೆ ದಾಖಲಾಗುತ್ತಿದ್ದಂತೆ ತಜ್ಞ ವೈದ್ಯರೇ ಇತ್ತ ಸುಳಿಯುತ್ತಿರಲಿಲ್ಲ. ಬರೀ ಮೆಡಿಸಿನ್ ವಿಭಾಗದವರು ಹಾಗೂ ಶುಶ್ರೂಷಕರನ್ನು ಮುಂದೆ ಬಿಟ್ಟು ಹೊರಡುತ್ತಿದ್ದರು. ಅಲ್ಲದೆ, ಸ್ನಾತಕ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಹಚ್ಚುತ್ತಿದ್ದರು.

ಎಲ್ಲ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ ಗೈರು ಹಾಜರಾಗುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೂ ಕೆಲವರು ಆಸ್ಪತ್ರೆಗಳಿಗೆ ಬಾರದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಮಾಹಿತಿ ರವಾನೆ: ಪ್ರತಿ ವಿಭಾಗದ ವೈದ್ಯರು ಮತ್ತು ಶುಶ್ರೂಷಕರು ದಿನಕ್ಕೆ ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು. ಸ್ನಾತಕೋತ್ತರ ವಿದ್ಯಾರ್ಥಿಗಳು, ಆಯಾಗಳು, ವಾರ್ಡ್ ಬಾಯ್ಗಳಿಗೆ ಇಂತಿಂಥ ಕೆಲಸ ಎಂದು ನಿಗದಿ ಮಾಡಲಾಗಿದೆ. ಈ ಮಾಹಿತಿಯನ್ನು ಈಗಾಗಲೇ ಜಿಲ್ಲಾಧಿಕಾರಿಗೂ ರವಾನಿಸಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

ಕೆಲ ವೈದ್ಯರು ತಮ್ಮ ಕೆಲಸವಲ್ಲವೆಂದು ಆಸ್ಪತ್ರೆಯಿಂದ ದೂರ ಉಳಿದಿದ್ದಾರೆ. ಅವರೆಲ್ಲರೂ ಚಿಕಿತ್ಸೆ ನೀಡಲು ಆಗಮಿಸಬೇಕು. ಶುಶ್ರೂಷಕರೂ ತಮಗೆ ವಹಿಸಿದ ಕೆಲಸ ನಿರ್ವಹಿಸಬೇಕು. ರಜೆ ತೆಗೆದುಕೊಂಡವರು, ವಹಿಸಿದ ಕೆಲಸ ಮಾಡದೇ ಇದ್ದವರು ಅಮಾನತು, ವಜಾ ಸೇರಿ ವಿವಿಧ ಶಿಕ್ಷೆ ಅನುಭವಿಸಲು ಸಿದ್ಧರಾಗಿರಬೇಕು. ಕೆಲಸದಿಂದ ತಪ್ಪಿಸಿಕೊಂಡರೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು.| ಡಾ. ಅರುಣಕುಮಾರ ಚವ್ಹಾಣ, ಪ್ರಭಾರ ವೈದ್ಯಕೀಯ ಅಧೀಕ್ಷಕ, ಕಿಮ್್ಸ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net