ಜಿಲ್ಲೆಯಲ್ಲಿ ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗಿದೆ: ಕೆ.ರಾಮರಾಜನ್

vicharagosti
Published on

ಮಡಿಕೇರಿ: ಕೊಡಗಿನ ಜನತೆ ಕಾನೂನಿಗೆ ಸೂಕ್ತ ಗೌರವ ನೀಡುತ್ತಿದ್ದು, ರಾಜಿ ಪಂಚಾಯತ್‌ಗಳಿಗೆ ಆದ್ಯತೆ ನೀಡದೇ ಇರುವುದರಿಂದಲೇ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಕೊಡಗು ಜಿಲ್ಲೆಯಲ್ಲಿ ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಭಿಪ್ರಾಯಪಟ್ಟರು.


ನಗರದ ಹೊರವಲಯದಲ್ಲಿನ ಆಹನ್ ಹಿಲ್ ಕಾಟೇಜ್‌ನಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಆಯೋಜಿತ ನಿರಂತರ ಕಲಿಕಾ ಕಾರ್ಯಾಗಾರ ಮತ್ತು ಔಷಧಿ ಕ್ಷೇತ್ರದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ರಾಮರಾಜನ್ ಮಾತನಾಡಿದರು.


ಶಿಸ್ತು ಮತ್ತು ಶಿಕ್ಷಣವಂತರಾದ ಕೊಡಗಿನ ಜನತೆ ಹೆಚ್ಚಿನ ಪಾಲು ಕಾನೂನು ಅನುಸರಿಸುತ್ತಾ ನಿಯಮಗಳನ್ನು ಪಾಲಿಸುತ್ತಾರೆ. ಹೀಗಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪರಾಧ ಪ್ರಕರಣಗಳ ಸಂದರ್ಭ ರಾಜಿಪಂಚಾಯತ್, ಒತ್ತಡ ಹೇರುವಿಕೆ ಗಣನೀಯವಾಗಿ ಕಡಮೆಯಿದೆ. ಇದರಿಂದಾಗಿಯೇ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಶಿಕ್ಷೆಯ ಪ್ರಮಾಣ ಕೊಡಗಿನಲ್ಲಿ ಹೆಚ್ಚಾಗಿದೆ ಎಂದರು.


ಮಾದಕ ವ್ಯಸನಿಗಳಿಗೆ ಮಾದಕ ಪದಾರ್ಥಗಳನ್ನು ಅಂಗಡಿಗಳಲ್ಲಿ ಯಾರೂ ನೀಡಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಔಷಧಿ ವ್ಯಾಪಾರಸ್ಥರೂ ಕೈಜೋಡಿಸುವಂತೆ ಮನವಿ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ, ಔಷಧಿ ವ್ಯಾಪಾರಸ್ಥರ ಬಗ್ಗೆ ಜನಸಾಮಾನ್ಯರಲ್ಲಿ ಅತೀಯಾದ ವಿಶ್ವಾಸ, ನಂಬಿಕೆ ಇರುತ್ತದೆ. ಹೀಗಾಗಿ ಈ ವಿಶ್ವಾಸವನ್ನು ಖಂಡಿತವಾಗಿಯೂ ವ್ಯಾಪಾರಸ್ಥರು ಕಳೆದುಕೊಳ್ಳಬಾರದು ಎಂದರು.


ಸರಿಯಾದ ಔಷಧಿ ನೀಡದೇ ರೋಗಿ ಆರೋಗ್ಯ ಸಂಬಂಧಿತ ಸಮಸ್ಯೆಗೆ ಸಿಲುಕಿದ್ದೇ ಆದಲ್ಲಿ ಔಷಧಿ ವ್ಯಾಪಾರಸ್ಥರೂ ಒಂದಲ್ಲ ಒಂದು ದಿನ ಕಾನೂನಿನ ಕುಣಿಕೆ ಎದುರಿಸಬೇಕಾಗುತ್ತದೆ. ಓರ್ವ ಔಷಧಿ ವ್ಯಾಪಾರಸ್ಥ ಲೋಪದೋಷಗಳಿಂದ ಕೂಡಿದ ಔಷಧಿ ನೀಡಿದ್ದೇ ಆದಲ್ಲಿ ಆಗ ಸಮಸ್ಯೆ ಉಂಟಾದರೆ ಅದು ಎಲ್ಲಾ ಔಷಧಿ ವ್ಯಾಪಾರಸ್ಥರ ಮೇಲೂ ಸಮಾಜದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಔಷಧಿ ವ್ಯಾಪಾರಸ್ಥರು ಅತ್ಯಂತ ಜಾಗರೂಕತೆಯಿಂದ ಔಷಧಿ ಮಾರಾಟ ಮಾಡುವಂತೆಯೂ ಸಲಹೆ ನೀಡಿದರು.


ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘಧ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ದೇಶದಲ್ಲಿ ೧೨.೫೦ ಲಕ್ಷ ಔಷಧಿ ವ್ಯಾಪಾರಸ್ಥರಿದ್ದು, ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದಲ್ಲಿ ೨೬ ಸಾವಿರ ಸದಸ್ಯರಿದ್ದರೆ, ಕೊಡಗು ಜಿಲ್ಲಾ ಸಂಘದಲ್ಲಿ ೨೬೦ ಸದಸ್ಯರಿದ್ದಾರೆ. ಮಾದಕ ದ್ರವ್ಯಗಳ ವಿರುದ್ಧ ಪೊಲೀಸ್ ಇಲಾಖೆ ಕೈಗೊಂಡಿರುವ ಸಮರಕ್ಕೆ ಜಿಲ್ಲಾ ಔಷಧಿ ವ್ಯಾಪಾರಸ್ಥರು ಸಹಕಾರ ನೀಡುತ್ತಾರೆ ಎಂದು ಭರವಸೆ ನೀಡಿದ ಜೀವನ್, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಎಲ್ಲರ ಸಂಕಲ್ಪವೂ ಆಗಿರಬೇಕೆಂದು ಅಭಿಪ್ರಾಯಪಟ್ಟರು.


ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಅನಿಲ್ ಧವನ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಕಾರಣವಾಗುತ್ತದೆ. ಈ ಹಿನ್ನಲೆಯಲ್ಲಿ ಔಷಧಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ವ್ಯಾಪಾರಿಗಳು ಮಹತ್ವ ನೀಡಲೇಬೇಕು. ಕಳಪೆ ಗುಣಮಟ್ಟದ ಆಹಾರ ವಿತರಣೆ ಬಗ್ಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಸಿದರು.


ಮಡಿಕೇರಿ ತಾಲೂಕು ಕ್ಷಯ ರೋಗ ನಿಯಂತ್ರಣಧಿಕಾರಿ ಡಾ.ಚೇತನ್, ಮೈಸೂರು ವೃತ್ತದ ಉಪಔಷಧ ನಿಯಂತ್ರಕ ಬಿ.ಪಿ.ಅರುಣ್, ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಗುರುನಾಥ್ ಮಾಗಣಗೇರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್.ಹರ್ಷವರ್ಧನ್ ಮಾತನಾಡಿದರು.


ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಕಾನೂನು ಸಲಹೆಗಾರ ಕೆ.ಹರೀಶ್, ಸಂಘದ ಜಿಲ್ಲಾ ಗೌರವ ಕಾರ್ಯದರ್ಶಿ ಡಿ.ಐ.ಪುರುಷೋತ್ತಮ, ಉಪಾಧ್ಯಕ್ಷರಾದ ಅಂಬೆಕಲ್ ವಿನೋದ್, ಸಂಪತ್ ಕುಮಾರ್, ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಔಷಧಿ ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಮೂಲಕ ವಿವಿಧ ವಿಚಾರಗಳ ಬಗ್ಗೆ ತಮ್ಮಲ್ಲಿನ ಸಂದೇಹ ಪರಿಹರಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net