ಅತ್ಯಾಚಾರ ಎಸಗಿದವನಿಗೆ 20 ವರ್ಷ ಶಿಕ್ಷೆ: ಅಧಿಕ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯದ ತೀರ್ಪು

Court Justice
Published on

ಮಂಡ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಶಿಕ್ಷೆ ವಿಧಿಸಿ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯ ತೀರ್ಪು ನೀಡಿದೆ.

ನಾಗಮಂಗಲ ತಾಲೂಕು ಮೂಲದ ರವಿ(35) ಶಿಕ್ಷೆಗೆ ಒಳಗಾದ ಅಪರಾಧಿ. ಈತ 2019ರಲ್ಲಿ ಗ್ರಾಮವೊಂದರ ಐದು ವರ್ಷದ ಬಾಲಕಿಯನ್ನು ನಮ್ಮ ಹೊಲದ ಕಡೆ ತಿರುಗಾಡಿಕೊಂಡು ಬರೋಣವೆಂದು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದನು. ಮಾತ್ರವಲ್ಲದೆ ಯಾರಿಗಾದರೂ ಹೇಳಿದರೆ ಹೊಡೆಯುತ್ತೇನೆಂದು ಬೆದರಿಕೆ ಹಾಕಿದ್ದನು. ಈ ಕುರಿತು ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಅಂದಿನ ವೃತ ನಿರೀಕ್ಷಕ ನಂಜಪ್ಪ ಆರೋಪಿ ವಿರುದ್ಧ ದೋಷರೋಪಣಾ ಪತ್ರ ಸಲ್ಲಿಸಿದರು.

ಈ ಕುರಿತು ವಿಚಾರಣೆ ನಡೆಸಿದ ಮಂಡ್ಯ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ ನಾಗಜ್ಯೋತಿ ಅವರು ಅಪರಾಧಿಗೆ ಐಪಿಸಿ ಅಡಿ ಅಪರಾಧಕ್ಕೆ 20 ವರ್ಷ ಸಜೆ ಮತ್ತು 50 ಸಾವಿರ ರೂ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ಐಪಿಸಿ ಕಲಂ 366 ಅಡಿಯಲ್ಲಿನ ಅಪರಾಧಕ್ಕೆ 2 ವರ್ಷಗಳ ಶಿಕ್ಷೆ ಮತ್ತು 25 ಸಾವಿರ ರೂ ದಂಡ, ತಪ್ಪಿದಲ್ಲಿ 6 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net