ಅತ್ಯಾಚಾರವೆಸಗಿದವನಿಗೆ ಹತ್ತು ವರ್ಷ ಸಜೆ: ಮಂಡ್ಯ ಸೆಷನ್ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ

Jail Punishment
Published on

ಮಂಡ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷ ಕಾರಾಗೃಹ ವಾಸ ಹಾಗೂ 50 ಸಾವಿರ ರೂ ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ 3 ವರ್ಷ ಜೈಲುವಾಸ ಹಾಗೂ 1 ಸಾವಿರ ರೂ ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ ಮತ್ತು ತ್ವರಿತಗತಿ ನ್ಯಾಯಾಲಯ ಜು.19ರಂದು ತೀರ್ಪು ಪ್ರಕಟಿಸಿದೆ.

ಕೆ.ಆರ್.ಪೇಟೆ ತಾಲೂಕಿನ ಮಂಜ(27) ಶಿಕ್ಷೆಗೊಳಗಾದ ಅಪರಾಧಿ. ಕೆ.ಆರ್.ಪೇಟೆ ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆ 2017 ಸೆ.9ರಂದು ಅಜ್ಜಿಯ ಮನೆಗೆಂದು ರಸ್ತೆಯಲ್ಲಿ ಹೋಗುತ್ತಿದ್ದಳು. ಈ ಸಮಯದಲ್ಲಿ ಬೈಕ್‌ನಲ್ಲಿ ಬಂದ ಮಂಜ, ಬೈಕ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿ ಪುಸಲಾಯಿಸಿ ಹಾಗೂ ಬಲವಂತದಿಂದ ಕೂರಿಸಿಕೊಂಡಿದ್ದಾನೆ. ನಂತರ ತನ್ನ ಸ್ನೇಹಿತನನ್ನು ಮಾತನಾಡಿಸಿಕೊಂಡು ಬರೋಣವೆಂದು ಮೇಲುಕೋಟೆ ರಸ್ತೆಯಲ್ಲಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ, ಲೈಂಗಿಕ ದೌರ್ಜನ್ಯದ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂದು ದೂರು ದಾಖಲಾಗಿತ್ತು. ಈ ಸಂಬಂಧ ಐಪಿಸಿ ಕಾಲಂ-6 ಪೋಕ್ಸೋ ಕಾಯ್ದೆ-2012ರಡಿ ಅಂದಿನ ಸರ್ಕಲ್ ಇನ್‌ಸ್ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅವರು ತೀರ್ಪು ನೀಡಿದ್ದಾರೆ. ಮಾತ್ರವಲ್ಲದೆ 1 ಸಾವಿರ ರೂ ದಂಡ ಪಾವತಿಸಿದ್ದರೆ ಹೆಚ್ಚುವರಿಯಾಗಿ 9 ತಿಂಗಳು ಶಿಕ್ಷೆ ಅನುಭವಿಸಬೇಕೆಂದು ಸೂಚಿಸಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು. ಪ್ರಕರಣ ಸಂಬಂಧ ಪೇದೆ ಪ್ರಕಾಶ್ ಕೋರ್ಟ್ ಕೆಲಸ ನಿರ್ವಹಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net