ಕೆರೆ ಜಾಗ ಒತ್ತುವರಿದಾರರಿಗೆ ಶಿಕ್ಷೆ ಪ್ರಕಟ

Vijayavani-Featured-Image
Published on

ಬೆಂಗಳೂರು: ಕೆರೆಯ ಜಮೀನನ್ನು ಒತ್ತುವರಿ ಮಾಡಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಿಸಿಕೊಂಡಿದ್ದ ಮೂವರಿಗೆ ತಲಾ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧದ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಗ್ರಾಮದ ಸರ್ವೇ ನಂ.159ರ 32 ಎಕರೆ 13 ಗುಂಟೆ ಸರ್ಕಾರಿ ಕೆರೆಯ ಜಮೀನು ಆಗಿದೆ. ಇದರ ಕೆಲ ಭಾಗವನ್ನು ಆರೋಪಿಗಳಾದ ಕೃಷ್ಣಪ್ಪ, ನಂಜಪ್ಪ, ರಾಮಯ್ಯ, ಎಂ.ವೆಂಕಟೇಶ್, ಎಚ್.ಎಂ.ಸುಬ್ಬಣ್ಣ, ಲಕ್ಷ್ಮೀದೇವಿ ಹಾಗೂ ಪಿಳ್ಳಪ್ಪ ಅವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ವಾಸದ ಮನೆ ಹಾಗೂ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದರು. ಇದರ ವಿರುದ್ಧ ಬಿಎಂಟಿಎಫ್​ ಪೊಲೀಸ್ ಠಾಣೆಯಲ್ಲಿ 2012ರ ಫೆ.22ರಂದು ದೂರು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಹಾಲಿ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಸಾಕ್ಷಾಧಾರ ಮತ್ತು ದಾಖಲಾತಿ ಸಂಗ್ರಹಿಸಿ ಆರೋಪಿಗಳ ವಿರುದ್ಧ ಬೆಂಗಳೂರಿನಲ್ಲಿರುವ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆರೋಪಿಗಳು ಕೆರೆಯ ಸ್ವತ್ತನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದು ಧೃಡಪಟ್ಟಿತ್ತು. ಹಾಗಾಗಿ ಆರೋಪಿಗಳಾದ ಎಂ.ವೆಂಕಟೇಶ್, ಎಚ್.ಎಂ.ಸುಬ್ಬಣ್ಣ ಮತ್ತು ಲಕ್ಷ್ಮೀದೇವಿ ಅವರಿಗೆ ತಲಾ 1 ವರ್ಷ ಸಜೆ ಹಾಗೂ 5,000 ರೂ. ದಂಡ ವಿಧಿಸಿ ಇತ್ತೀಚಿಗೆ ಆದೇಶಿಸಲಾಗಿದೆ.

ಪ್ರಕರಣದಲ್ಲಿ ಬಿಎಂಟಿಎಫ್​ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಡಿ.ರಾಜು ಅವರು ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸರ್ಕಾರದ ಜಾಗ ಉಳಿಸುವಲ್ಲಿ ಕಾಳಜಿ ವಹಿಸಿದ ರಾಜು ಸೇರಿ ಕೋರ್ಟ್ ಮಾನಿಟರಿಂಗ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಿಎಂಟಿಎಫ್​​ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net