ದೇವಸ್ಥಾನದ ಹುಂಡಿ ದೋಚಿದವನಿಗೆ ಶಿಕ್ಷೆ

manjunath
ಮಂಜುನಾಥ
Published on

ಶಿವಮೊಗ್ಗ: ದೇವಸ್ಥಾನದ ಬೀಗ ಮುರಿದು ಕಾಣಿಕೆ ಹುಂಡಿ ಒಡೆದು ಕಳವು ಮಾಡಿದ್ದವನಿಗೆ ತೀರ್ಥಹಳ್ಳಿಯ ಹಿರಿಯ ವ್ಯವಹಾರ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಹೊಸಕೊಪ್ಪದ ಬೇರುಕೊಡಿಗೆಯ ಮಂಜುನಾಥ ಅಲಿಯಾಸ್ ಬೋರ (41) ಶಿಕ್ಷೆಗೆ ಒಳಗಾದ ಅಪರಾಧಿ. ತೀರ್ಥಹಳ್ಳಿ ತಾಲೂಕಿನ ಹೊಸಕೊಪ್ಪ ಚಂಗಾರು ಗ್ರಾಮದ ಉಮಾಮಹೇಶ್ವರ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಕಾಣಿಕೆ ಹಣ ಕಳವು ಮಾಡಿದ ಬಗ್ಗೆ 2021ರ ಜುಲೈ 7ರಂದು ಆಗುಂಬೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ, ಅಂದಿನ ಆಗುಂಬೆ ಠಾಣೆ ಪಿಎಸ್‌ಐ ಶಿವಕುಮಾರ್ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಭರತ್, ಆರೋಪ ಸಾಬೀತಾಗಿದ್ದರಿಂದ ಮಂಜುನಾಥಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಡಿ.ಜೆ.ಪ್ರೇಮಲೀಲಾ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net