

ಬಾದಾಮಿ: ಗುಳೇದಗುಡ್ಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನದಂದು ಗಲಭೆ ಸಷ್ಟಿಸಲು ಗೂಂಡಾಗಳನ್ನು ಕರೆಸಿದ್ದು ಹೇಯ ಕತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಕಾನಿಪ ಸಂಘದ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡ್ರ, ಬಾದಾಮಿ ಪುರಸಭೆ ಅಧ್ಯಕ್ಷ ಪಾಂಡು ಕಟ್ಟಿಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವು ಹಿರೇಮಠ ಮಾತನಾಡಿ, ಆ.30 ರಂದು ಚುನಾವಣೆ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುಂಜಾಗ್ರತೆ ಕ್ರಮ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನು ಶ್ಲಾಸಿದರು.
ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಗ್ರಾಪಂ ಸದಸ್ಯ ಬಸವರಾಜ ತಳವಾರ, ಗುತ್ತಿಗೆದಾರ ಬಾಲಪ್ಪ ನಂದೆಪ್ಪನ್ನವರ ಮಾತನಾಡಿ, ಗುಳೇದಗುಡ್ಡ ಘಟನೆ ಬಗ್ಗೆ ಕಾಂಗ್ರೆಸ್ ಪಕ್ಷದ ತಾಲೂಕು, ಜಿಲ್ಲಾ ಮತ್ತು ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಜಾಕ ರಾಜೂರ, ಬೇಲೂರಪ್ಪ ಬೇಲೂರಪ್ಪನ್ನವರ, ಹನುಮಂತ ಅಪ್ಪನ್ನವರ, ಭರಮಪ್ಪ ಕಾಟನ್ನವರ, ಲಕ್ಷ್ಮಣ ಕೊಚಲ, ಶೌಕತ್ ವಾಚಮೇಕರ, ರಂಗನಾಥ ಮೇಟಿಕಲ್, ಬಸವರಾಜ ಡೊಳ್ಳಿನ, ಹುಲ್ಲಪ್ಪ ಬಿಳೆಕಲ್, ಮುತ್ತಣ್ಣ ಬಾಗಲೆ ಇತರರು ಇದ್ದರು.