

ಬೆಂಗಳೂರು: ಮೈಸೂರಿನ ಉದಯಗಿರಿ ಗಲಭೆಗೆ ಕಾರಣರಾದವರ ಹೆಡೆಮುರಿಕಟ್ಟುವಂತೆ(Punish those responsible for the Udayagiri riots) ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ತಾಕೀತು ಮಾಡಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಮೈಸೂರು ಡಿಜಿ, ಡಿಸಿ ಮತ್ತು ಪೊಲೀಸ್ ಆಯುಕ್ತರ ಸಭೆಯಲ್ಲಿ ಘಟನೆ ಕುರಿತು ಸಮಗ್ರ ಮಾಹಿತಿ ಪಡೆದರಲ್ಲದೆ, ಸಮಾಜದ ಸೌಹಾರ್ದತೆ ಹದಗೆಡಿಸುವ, ಶಾಂತಿ ಭಂಗ ಉಂಟು ಮಾಡುವವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇಂತಹ ಘಟನೆಗಳಿಂದ ಸರ್ಕಾರ ಮುಜುಗರ ಎದುರಿಸಬೇಕಾಗುತ್ತದೆ. ತಪ್ಪಿಸ್ಥರು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ, ಯಾವುದೇ ಕೋಮು, ವರ್ಗಕ್ಕೆ ಸೇರಿದವರಿರಲಿ ಅವರನ್ನು ಬಂಧಿಸಿ ಶಿಕ್ಷೆ ಕೊಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
ಇಂತಹ ಘಟನೆ ಮತ್ತೆ ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಘಟನೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಕೋಮು ಸಾಮರಸ್ಯ ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಇಂತಹ ಗಲಭೆಗಳು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತವೆ. ಪರಸ್ಪರ ಕೋಮು ಧಳ್ಳುರಿಗೆ ಕಾರಣವಾಗುತ್ತದೆ. ಹಾಗಾಗಿ ಇಂತಹ ಘಟನೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಸಣ್ಣ ಸೂಕ್ಷ್ಮಗಳು ಕಂಡು ಬಂದರೂ ತಕ್ಷಣ ಅವುಗಳನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿಪಕ್ಷಗಳು ಇಂತಹ ಘಟನೆಯನ್ನು ದೊಡ್ಡದು ಮಾಡಿ ಪ್ರಚಾರ ಪಡೆಯುತ್ತವೆ. ಅದಕ್ಕೆ ಆಸ್ಪದ ನೀಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಪರಸ್ಪರರು ಕೂಡಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಪೊಲೀಸರು ಮತ್ತು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾಗಿ ಎಂದು ಮೂಲಗಳು ತಿಳಿಸಿವೆ.