ಅತ್ಯಾಚಾರವೆಸಗಿದ ಅಪರಾಧಿಗೆ 13 ವರ್ಷ ಶಿಕ್ಷೆ: ಅಧಿಕ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯದಿಂದ ತೀರ್ಪು

Court
Published on

ಮಂಡ್ಯ: ಅಂಗವಿಕಲ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 13 ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ ದಂಡ ವಿಧಿಸಿ ಮಂಡ್ಯ ಅಧಿಕ ಸತ್ರ ಮತ್ತು ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ತೀರ್ಪು ನೀಡಿದ್ದಾರೆ.

ಮಂಡ್ಯ ಸುಭಾಷ್‌ನಗರದ ಮಹೇಶ್ ಎಂಬಾತನೇ ಶಿಕ್ಷೆಗೊಳಗಾದವ. 2022ರಲ್ಲಿ ಈತ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾರಿನಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಹಿಂಭಾಗದ ರಸ್ತೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದನು. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆ ಹಾಗೂ ಪಾಲಕರು ದೂರು ನೀಡಿದ್ದರು. ತನಿಖೆ ನಡೆಸಿದ ಅಂದಿನ ಇನ್‌ಸ್ಪೆಕ್ಟರ್ ಎಸ್.ಕೆ.ಕೃಷ್ಣ ಫೋಕ್ಸೋ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅವರು ಅಪರಾಧಿಗೆ ಕಲಂ 354(2ಇ) ಅಡಿಯಲ್ಲಿ ಒಂದು ವರ್ಷ ಶಿಕ್ಷೆ, 5 ಸಾವಿರ ರೂ ದಂಡ, ಕಟ್ಟಲು ತಪ್ಪಿದಲ್ಲಿ 2 ತಿಂಗಳ ಸಾದಾ ಶಿಕ್ಷೆ ಹಾಗೂ ಕಲಂ 376(2)(ಐ) ಅಡಿಯಲ್ಲಿ ಅಪರಾಧಕ್ಕೆ 12 ವರ್ಷ ಶಿಕ್ಷೆ, 30 ಸಾವಿರ ರೂ ದಂಡ, ಒಂದು ವೇಳೆ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ಅವರು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net