ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತು: ಅಪರಾಧಿಗೆ 28 ವರ್ಷ ಜೈಲು ಶಿಕ್ಷೆ ವಿಧಿಸಿದ ಮಂಡ್ಯ ನ್ಯಾಯಾಲಯ

court new
Published on

ಮಂಡ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 28 ವರ್ಷ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ 65,500 ರೂ ದಂಡ ವಿಧಿಸಿ ಅಧಿಕ ಸೆಷನ್ಸ್ ಮತ್ತು ತ್ವರಿತಗತಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ನಗರದ ಹಾಲಹಳ್ಳಿ ಲೇಬರ್ ಕಾಲನಿಯ ಸಲ್ಮಾನ್ ಪಾಷಾ(26) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2022ರಲ್ಲಿ ಬಡಾವಣೆಯೊಂದರ 11 ವರ್ಷದ ಬಾಲಕಿ ಶಾಲೆ ಮತ್ತು ಟ್ಯೂಷನ್‌ಗೆ ಹೋಗುವಾಗ ಹಿಂಬಾಲಿಸಿಕೊಂಡು ಹೋಗಿ ತಿಂಡಿ ಕೊಟ್ಟು ಮಾತನಾಡಿಸುತ್ತಿದ್ದನು. ಮಾತ್ರವಲ್ಲದೆ ಜು.2ರಂದು ಟ್ಯೂಷನ್‌ಗೆ ಹೋಗುವ ವೇಳೆ ಯಾರು ಇಲ್ಲದ ಸಮಯ ನೋಡಿಕೊಂಡು ತನ್ನ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದನು. ಮರುದಿನ ರಾತ್ರಿ ಊಟ ಮುಗಿಸಿ ತಮ್ಮ ಮನೆಯ ರೂಂನಲ್ಲಿ ಮಲಗಿದ್ದ ಬಾಲಕಿಯನ್ನು ಪುಸಲಾಯಿಸಿ ಹೊರಗೆ ಕರೆದು, ನಂತರ ಗಿಫ್ಟ್ ಕೊಡುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ ನಡೆಸಿದ್ದನು.

ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಭಾದಂಸಂ 354(ಡಿ), 366, 378(ಎಬಿ), 376 (2)(ಎನ್) ಐಪಿಸಿ ಕಲಂ 6, 12 ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಇನ್ಸ್‌ಪೆಕ್ಟರ್ ಎಸ್.ಕೆ.ಕೃಷ್ಣ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಶೇಷ ಪ್ರಕರಣ ಕುರಿತಂತೆ ಮಂಡ್ಯದ ಅಧಿಕ ಸತ್ಯ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅವರು ವಿಚಾರಣೆ ನಡೆಸಿದರು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಭಾದಂಸಂ ಕಲಂ 354(ಡಿ) ಮತ್ತು ಪೋಕ್ಸೋ ಕಾಯ್ದೆ ಕಲಂ 12 ಅಡಿ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 363 ಮತ್ತು 366 ಕಾಯ್ದೆ ಅಡಿ ಅಪರಾಧಕ್ಕೆ 5 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ ದಂಡ, ಒಂದು ವೇಳೆ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 447 ಅಡಿ ಅಪರಾಧಕ್ಕೆ 3 ತಿಂಗಳ ಕಠಿಣ ಶಿಕ್ಷೆ ಮತ್ತು 500 ರೂ ದಂಡ, ಪಾವತಿ ಮಾಡದಿದ್ದಲ್ಲಿ 15 ದಿನ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 376ಎಬಿ ಮತ್ತು ಪೋಕ್ಸೋ ಕಾಯ್ದೆ ಕಲಂ 6 ಅಡಿ ಅಪರಾಧಕ್ಕೆ 21 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ ದಂಡ, ಪಾವತಿಸಲು ತಪ್ಪಿದಲ್ಲಿ 5 ವರ್ಷ ಕಠಿಣ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net