

ರಾಯಚೂರು: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಬರ್ಬರವಾಗಿ ಕೊಲೆ ಮಾಡಿರುವ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸರ್ಕಾರ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಪ್ರೀತಿ ನಿರಾಕರಿಸಿದ ಕಾರಣಕ್ಕೆ ನೇಹಾ ಕೊಲೆಯಾಗಿದೆ ಎಂದು ಹೇಳಲಾಗುತ್ತಿದ್ದು, ಮಹಿಳೆಯ ಆಯ್ಕೆ ಸ್ವಾತಂತ್ರ ಮತ್ತು ನಿರಾಕರಣೆ ಸ್ವಾತಂತ್ರವನ್ನು ಒಪ್ಪದ ದುಷ್ಕರ್ಮಿ ಆಕೆಯ ಹತ್ಯೆ ಮಾಡಿದ್ದಾನೆ. ಆದರೆ ಇಂತಹ ಘಟನೆಗಳಿಗೆ ಧರ್ಮ, ಜಾತಿ ಬಣ್ಣ ಬಳಿದು ರಾಜಕಾರಣಿಗಳು ದುರ್ಬಳಿಕೆ ಮಾಡಿಕೊಳ್ಳುವುದನ್ನು ತಡೆಯಬೇಕಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಕಾರ್ಯದರ್ಶಿ ವರಲಕ್ಷ್ಮಿ, ಪದಾಕಾರಿಗಳಾದ ಸುಲೋಚನಾ, ಶಕುಂತಲಾ, ರಜಿಯಾ ಬೇಗಂ, ಶಕುಂತಲಾ ದೇಸಾಯಿ, ಸಾವಿತ್ರಿ, ವಿಜಯಲಕ್ಷ್ಮಿ, ರೇಣುಕಾ, ನಾಗರತ್ನ ಪಾಲ್ಗೊಂಡಿದ್ದರು.