ಪುನೀತ್ ಸೇವಾ ಕಾರ್ಯಗಳು ಅಜರಾಮರ

22bhr 1
Published on

ಬಾಳೆಹೊನ್ನೂರು: ನಟ ದಿ.ಪುನೀತ್ ರಾಜ್‌ಕುಮಾರ್ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸೇವಾ ಕಾರ್ಯಗಳು ಅಜರಾಮರವಾಗಿವೆ ಎಂದು ನಿವೃತ್ತ ಇಂಜಿನಿಯರ್ ಟಿ.ಜಿ.ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಆಯೋಜಿಸಿದ್ದ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುನೀತ್ ಕೇವಲ ಚಿತ್ರನಟನಾಗಿರದೆ, ಒಬ್ಬ ಉತ್ತಮ ಸಮಾಜ ಸೇವಕ, ಸಮಾಜಮುಖಿ ಕಾರ್ಯಗಳನ್ನು ನಡೆಸುವ ವ್ಯಕ್ತಿಯಾಗಿದ್ದರು. ಯಾವುದೇ ಹೆಸರು, ಪ್ರಚಾರ ಬಯಸದೇ ಸಮಾಜಕ್ಕಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದಾರೆ. ಅವರು ಮಾಡಿದ ಕೆಲಸಗಳು ಯುವಜನರಿಗೆ ಪ್ರೇರಣೆ ನೀಡುತ್ತಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಪುನೀತ್ ಅವರು ಸೇವೆ ಸಲ್ಲಿಸದ ಕ್ಷೇತ್ರಗಳಿಲ್ಲ. ಕಿರಿಯ ವಯಸ್ಸಿನಲ್ಲಿಯೇ ಸಾವಿರಾರು ಸಾಧನೆ ಮಾಡಿದ ಸರದಾರನ ಮರಣ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇಂದು ಪುನೀತ್ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸೇವೆಗಳು ನಿತ್ಯ ಜೀವನದಲ್ಲಿ ನೆನಪಾಗಿ ಉಳಿದಿವೆ. ಅವುಗಳ ಮೂಲಕ ಅವರನ್ನು ಜೀವಂತವಾಗಿ ಕಾಣಲಾಗುತ್ತಿದೆ. ಅವರ ನೆನಪಿನಲ್ಲಿ ಅವರ ಅಭಿಮಾನಿಗಳು ಸಾವಿರಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸ್ವರ್ಣ ಮೋಟಾರ್ ಮಾಲೀಕ ಎಂ.ಎಸ್.ಸಚಿನ್, ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ, ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ನಿರ್ಮಾಪಕ ಮಂಜುನಾಥ್ ತುಪ್ಪೂರು, ಪ್ರಮುಖರಾದ ಸುರೇಂದ್ರ ಮಾಸ್ತರ್, ಸುಧಾಕರ್, ಮನುಕುಮಾರ್, ಎಚ್.ಗೋಪಾಲ್. ಚೇತನ್‌ಕುಮಾರ್, ವಿ.ರೋಹಿತ್, ಸುಮೇಶ್‌ಶೆಟ್ಟಿ, ಸತೀಶ್ ಕಿಣಿ, ಲೀಲಾ ರವಿಕುಮಾರ್, ಕೆ.ಎಂ.ರಾಘವೇಂದ್ರ, ರಿಚರ್ಡ್ ಮಥಾಯಿಸ್, ವಿ.ಅಶೋಕ, ಪಲ್ಲವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net