ಪುನೀತ್ ರಾಜಕುಮಾರ ಹೃದಯ ಜ್ಯೋತಿ ಮುಂದಿನ ತಿಂಗಳು ಆರಂಭ

h6-kims
Published on

ಹುಬ್ಬಳ್ಳಿ: ಮುಂದಿನ ತಿಂಗಳಿಂದ ಕರ್ನಾಟಕ ರತ್ನ ‘ದಿ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ’ ಯೋಜನೆ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 48 ಹಾಗೂ ಎರಡನೇ ಹಂತದಲ್ಲಿ 41 ಆಸ್ಪತ್ರೆಗಳಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕಿಮ್ಸ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ 10 ಬೆಡ್ ಗಳ ಟೆಲಿ ಐಸಿಯು ಹಬ್ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಜೀವ ಉಳಿಸುವುದು ಮಹತ್ವದ್ದು. ಅದರಲ್ಲೂ ಹೃದಯಘಾತದಲ್ಲಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಟೆಲಿ ಇಸಿಜಿ ಮೂಲಕ ಹೃದಯಘಾತ ಆದವರಿಗೆ ತುರ್ತಾಗಿ ಒಂದು ಇಂಜೆಕ್ಷನ್ ಮಾಡಿ, ಅವರ ಜೀವ ಉಳಿಸಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪುನೀತ್ ರಾಜಕುಮಾರ ಹೃದಯಜ್ಯೋತಿ ಯೋಜನೆ ಘೋಷಣೆ ಮಾಡಿದ್ದರು. ರಾಜ್ಯದ ಒಟ್ಟು 89 ಆಸ್ಪತ್ರೆಗಳಲ್ಲಿ ಎರಡು ಹಂತದಲ್ಲಿ ಯೋಜನೆ ಜಾರಿಯಾಗಲಿದೆ. ಇದೇ ರೀತಿ ಡಯಾಲಿಸಿಸ್ ಸೇರಿ ವಿವಿಧ ಚಿಕಿತ್ಸೆಗಳಿಗಾಗಿ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ ಎಂದರು.
ಗೋಲ್ಡನ್ ಹಾವರ್‌ನಲ್ಲಲಿ ಚಿಕಿತ್ಸೆ ಸಿಕ್ಕರೆ ಮುಂದೆ ರೋಗಿಯನ್ನು ದೊಡ್ಡ ಆಸ್ಪತ್ರೆಗಳಿಗೆ ಸೇರಿಸಬಹುದು. ಜನರ ಆರೋಗ್ಯ ಕಾಪಾಡಬೇಕು, ಜೀವ ಉಳಿಸಬೇಕೆಂಬುದು ಮೊದಲ ಆದ್ಯತೆ. ತಂತ್ರಜ್ಞಾನ ಬಳಸಿಕೊಂಡು ವೈದ್ಯರು ಸಾರ್ವಜನಿಕರಿಗೆ ಸಕಾಲಿಕ ಚಿಕಿತ್ಸೆ ನೀಡಿ ಎಂದರು.
ಆರೋಗ್ಯದ ಸಲಹೆ ನೀಡಲು ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಟೆಲಿ ಐಸಿಯು ಹಬ್ ಮೂಲಕ ವಿಶೇಷ ಆರೋಗ್ಯ ಸಲಹೆ ನೀಡಬಹುದು. ಗ್ರಾಮ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗೆ ದಾಖಲಾದಾಗ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸಾ ಸಲಹೆ ನೀಡಬಹುದು. ಇದರಿಂದ ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳ ಪ್ರಮಾಣ ಕಡಿಮೆಯಾಗಲಿದೆ. ಟೆಲಿ ಐಸಿಯು ಹಬ್ ಕ್ರಾಂತಿಕಾಯಿ ಹೆಜ್ಜೆಯಾಗಿದ್ದು, ಪರಿಣಾಮಕಾರಿ ಉಪಯೋಗವಾಗಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ರೋಗಿಗಳು ದಾಖಲಾದ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಹಬ್‌ನಿಂದ ಮಾಹಿತಿ ಪಡೆದುಕೊಂಡು ಚಿಕಿತ್ಸೆ ಕೊಡಬಹುದು. ತಾಲೂಕು ಆಸ್ಪತ್ರೆಯಲ್ಲಿ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕೆಂಬುದನ್ನು ತಿಳಿಸುವುದರಿಂದ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದು. ಹುಬ್ಬಳ್ಳಿ, ಬಳ್ಳಾರಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಟೆಲಿ ಐಸಿಯು ಹಬ್ ಆರಂಭ ಮಾಡಲಾಗುತ್ತಿದೆ ಎಂದರು.
10 ಬೆಡ್ ಐಸಿಯು ಮುಖ್ಯಸ್ಥ ಶ್ರೀಕಾಂತ ನಾದಮುನಿ ಮಾತನಾಡಿ, ಈಗಾಗಲೇ 10 ಸಾವಿರಕ್ಕೂ ಅಧಿಕ ರೋಗಿಗಳಿಗೆ ಮಾಹಿತಿ ನೀಡಲಾಗಿದೆ. ದೇಶದ 9 ರಾಜ್ಯದ 209 ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಹಬ್ ಆರಂಭಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಟೆಂಗಿನಕಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ ಡಿ., ಡಿಎಚ್‌ಒ ಡಾ. ಶಶಿ ಪಾಟೀಲ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ರಾಜಶೇಖರ ದ್ಯಾಬೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net