ಪುನೀತ್ ರಾಜಕುಮಾರ್ ಸದಾ ಜೀವಂತ: ಅಭಿಮಾನಿಗಳ ಸಂಘದ ಮುಖ್ಯಸ್ಥ ನಾಗರಾಜ್ ಹೇಳಿಕೆ

Puneeth Rajkumar Birthday Mandya
Published on

ಮಂಡ್ಯ: ಅಭಿಮಾನಿಗಳ ಅಭಿಮಾನಿ ಡಾ.ಪುನೀತ್‌ರಾಜಕುಮಾರ್ ಸದಾ ಜೀವಂತ ಎಂದು ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಮುಖ್ಯಸ್ಥ ಸ್ವರ್ಣಸಂದ್ರ ನಾಗರಾಜ್ ಹೇಳಿದರು.

ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ದೊಡ್ಮನೆ ಬಳಗದಿಂದ ಆಯೋಜಿಸಿದ್ದ ಡಾ.ಪುನೀತ್‌ರಾಜಕುಮಾರ್ ಅವರ 50ನೇ ವರ್ಷದ ಜನ್ಮದಿನಾಚರಣೆ ಮತ್ತು ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪು ಅವರು ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿದ್ದರೂ ಎಲೆಮರೆಕಾಯಿಯಂತೆ ಸಮಾಜಸೇವೆ ಮಾಡಿದ್ದಾರೆ. ಅಪ್ಪು ಸಾಧನೆ ಏನೆಂದು ಅವರು ತೀರಿ ಹೋದ ನಂತರ ತಿಳಿಯಿತು. ನಡೆದಂತೆ ನುಡಿಯುತ್ತಿದ ನಗುವಿನ ಒಡೆಯ ಎಂದು ಸ್ಮರಿಸಿದರು.

ಶಕ್ತಿದಾಮದ ಮೂಲಕ ನಿರಾಶ್ರಿತ ಮಹಿಳೆಯರಿಗೆ ನೆರವು, 1800 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, 16 ವೃದ್ಧಾಶ್ರಮ, 26 ಅನಾಥಶ್ರಮ, 19 ಗೋಶಾಲೆ ನಿರ್ವಹಣೆ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ಅಪ್ಪು ಉಚಿತ ರಾಯಭಾರಿಯಾಗಿದ್ದರು. ಚಿತ್ರರಂಗದಲ್ಲಿದ್ದುಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸಿ ಅಭಿಮಾನಿಗಳ ಮನದಲ್ಲಿ ನೆಲೆನಿಂತ ಪವರ್‌ಸ್ಟಾರ್ ಡಾ.ಪುನೀತ್‌ರಾಜಕುಮಾರ್ ಎಂದೆಂದಿಗೂ ಅಮರ ಎಂದು ನುಡಿದರು.

ಅಭಿಮಾನಿಗಳಾದ ರಘು, ಲೋಕೇಶ್, ಪುಟ್ಟೇಗೌಡ, ಬಸವೇಗೌಡ, ಬಸವರಾಜ್, ಸಿದ್ದೇಗೌಡ, ಚಿಕ್ಕಲಿಂಗೇಗೌಡ ಇತರರಿದ್ದರು.

ಅನ್ನದಾಸೋಹ: ನಗರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ನೂತನ್ ಬಿರಿಯಾನಿ ಹೋಟೆಲ್ ಬಳಿ ಅಪ್ಪು ಅಭಿಮಾನಿ ದೇವು ಮತ್ತು ಸ್ನೇಹ ಬಳಗ ಡಾ.ಪುನೀತ್‌ರಾಜಕುಮಾರ್ ಅವರ 50ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಪೌಷ್ಠಿಕಾಹಾರ ವಿತರಿಸಿದರು.

ನಮ್ಮಲ್ಲಿ ತಯಾರಿಸುತ್ತಿದ್ದ ಬಿರಿಯಾನಿ ಡಾ.ಪುನೀತ್‌ರಾಜಕುಮಾರ್ ಅವರು ಸಾಕಷ್ಟು ಬಾರಿ ಸವಿದ್ದಾರೆ. ಅದೇ ನಮ್ಮ ಪುಣ್ಯ. ಅವರೊಟ್ಟಿಗೆ ಕುಳಿತು ಊಟ ಮಾಡಿದ್ದು ನಮ್ಮ ಸೌಭಾಗ್ಯ. ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ, ದೊಡ್ಡ ನಾಯಕನಟ ಎನ್ನುವ ಅಹಂಕಾರವಿಲ್ಲದ ಜನರ ಅಭಿಮಾನಿಯಾಗಿದ್ದರು. ಅವರ ಜನ್ಮದಿನ ಪ್ರಯುಕ್ತ ಅನ್ನದಾನ ಮಾಡಿ ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net